ಜಲ್ಲಿಕಟ್ಟು ಬಿಕ್ಕಟ್ಟು: ಜಗತ್ತು ಗಮನಿಸುತ್ತಿದೆ, ಹೋರಾಟ ಶಾಂತಿಯುತವಾಗಿರಲಿ ಎಂದ ಕಮಲ್
ಶನಿವಾರ, 21 ಜನವರಿ 2017 (15:28 IST)
ಜಲ್ಲಿಕಟ್ಟು ನಿಷೇಧಕ್ಕೆ ತೆರವು ಕೋರಿ ನಡೆಸಲಾಗುತ್ತಿರುವ ಪ್ರತಿಭಟನೆಗೆ ಬೆಂಬಲವನ್ನು ಮುಂದುವರೆಸಿರುವ ಸೂಪರ್ ಸ್ಟಾರ್ ಕಮಲ್ ಹಾಸನ್ ಜಗತ್ತು ನಮ್ಮನ್ನು ಗಮನಿಸುತ್ತಿದೆ, ಹೋರಾಟ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಜಲ್ಲಿಕಟ್ಟು ಆಚರಣೆ ಪರ ಹೊರಡಿಸಲಾಗಿದ್ದ ಸುಗ್ರಿವಾಜ್ಞೆಗೆ ಕೇಂದ್ರ ಅನುಮೋದನೆ ನೀಡಿದ ಬಳಿಕ ಪ್ರತಿಭಟನಾಕಾರರು ಉಲ್ಲಸಿತರಾದರು. ಆದರೆ ಜಲ್ಲಿಕಟ್ಟು ಕ್ರೀಡೆ ನೀಡುವವರೆಗೂ ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಯುವ ಪ್ರತಿಭಟನಾಕಾರರು ಘೋಷಿಸಿದ್ದಾರೆ.
ಈ ಪ್ರತಿಭಟನೆ ಇಂದು ಐದನೆಯ ದಿನಕ್ಕೆ ಕಾಲಿಟ್ಟಿದ್ದು ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್, ಅಜಿತ್, ಸಿಂಬು, ತ್ರಿಷಾ, ಎ.ಆರ್.ರೆಹಮಾನ್ ಸೇರಿದಂತೆ ಹಲವರು ಈ ಬೃಹತ್ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಈ ಕುರಿತು ಕಮಲ್ ಮಾಡಿರುವ ಸರಣಿ ಟ್ವೀಟ್‌ಗಳು ಇಂತಿವೆ:
"ನಮ್ಮ ಅಸಮಧಾನಕ್ಕೆ ಪ್ರತಿಭಟನೆಯೊಂದು ಮಾದರಿಯಾಗಿತ್ತು. ಈಗಾಗಲೇ ನಾವು ಸಾಕಷ್ಟು ನೋವುಂಡಿದ್ದೇವೆ. ಇನ್ನು ಬ್ಯಾಂಡ್ ಏಡ್ ಬೇಡ. ಗಾಯ ವಾಸಿಯಾಗುವ ಸಮಯ ಬಂದಿದೆ".
"ತಮಿಳರ ಪ್ರತಿಭಟನೆಯನ್ನು ಸಂಪೂರ್ಣ ವಿಶ್ವವೇ ನೋಡಿದೆ. ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ ತಮಿಳಿಗರು".
"ಸೆಲಿಬ್ರಿಟಿಗಳೇ ಪ್ರಚಾರಗಿಟ್ಟಿಸಲು ಬೆಂಬಲ ನೀಡಬೇಡಿ. ನಿಜ ಮನಸ್ಸಿನಿಂದ ಬೆಂಬಲ ನೀಡಿ".
"ನನ್ನ ಜನರು ತಮಿಳುನಾಡಿನಾದ್ಯಂತ ಹೇಗೆ ಸೇರಿದ್ದಾರೆ ಎಂಬುದನ್ನು ನೋಡಲು ಸುದ್ದಿಯನ್ನು ವೀಕ್ಷಿಸುತ್ತೇನೆ. ಕಣ್ಣೀರು ಬಂತು. ನೀವಿನ್ನು ವಿದ್ಯಾರ್ಥಿಗಳಾಗಿ ಉಳಿದಿಲ್ಲ. ಗುರುಗಳು. ನಾನು ನಿಮ್ಮ ಅಭಿಮಾನಿ."
'ಜಲ್ಲಿಕಟ್ಟು ಸ್ಪರ್ಧೆಯಿಂದಾಗಿ ಪ್ರಾಣಿ ಹಿಂಸೆ ನಡೆಯುತ್ತದೆ ಎಂದು ವಾದಿಸುವವರು ಬಿರಿಯಾನಿಯನ್ನೂ ನಿಷೇಧಿಸಬೇಕು' ಎಂದು ಈ ಹಿಂದೆ ಕಮಲ್ ಹೇಳಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ