ಜಲ್ಲಿಕಟ್ಟು : ಸುಗ್ರಿವಾಜ್ಞೆಗೆ ತಯಾರಿ ನಡೆಸಿದ ತಮಿಳುನಾಡು ಸರ್ಕಾರ

ಶುಕ್ರವಾರ, 20 ಜನವರಿ 2017 (11:03 IST)
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜನರನ್ನು ಶಾಂತಗೊಳಿಸಲು ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. 

ಜಲ್ಲಿಕಟ್ಟುದೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವೇ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತಹ ಕರಡನ್ನು ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಗೃಹ ಸಚಿವಾಲಯ ಇದಕ್ಕೆ ಅನುಮತಿ ನೀಡಿದರೆ ರಾಜ್ಯಪಾಲರ ಸಹಿ ಪಡೆಯುವುದೊಂದೇ ಬಾಕಿ ಇರುತ್ತದೆ. ಹೀಗಾಗಿ ಮತ್ತೆರಡು ದಿನಗಳಲ್ಲಿ  ನಿಮಗೆ ಸಿಹಿ ಸುದ್ದಿ ನೀಡಲಿದ್ದೇವೆ. ಪ್ರತಿಭಟನೆ ಹಿಂಪಡೆಯಿರಿ ಎಂದು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮನವಿ ಮಾಡಿಕೊಂಡಿದ್ದಾರೆ. 
 
ನಿನ್ನೆ ಪ್ರಧಾನಿ ಮೋದಿಯನ್ನು ಭೇಟಿಯಾಗಿ ನಿರಾಸರಾಗಿ ಹಿಂತಿರುಗಿದ್ದ ಸೆಲ್ವಂ, ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರನ್ನು ಭೇಟಿ ಮಾಡಿ ಕಾನೂನು ಸಲಹೆ ಪಡೆದಿದ್ದರು. ಈ ಸಂದರ್ಭದಲ್ಲಿ ರೋಹ್ಟಗಿ ಸಂಪ್ರದಾಯ- ಸಂಸ್ಕೃತಿ ರಕ್ಷಣೆ ಉದ್ದೇಶದಿಂದ ರಾಜ್ಯ ಸರ್ಕಾರ ಕಾನೂನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದರು. 
 
ಮತ್ತೀಗ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿರುವ ಸಿಎಂ ಸೆಲ್ವಂ, ರಾಜ್ಯ ಸರ್ಕಾರ ಸುಗ್ರಿವಾಜ್ಞೆ ತಯಾರಿಸಿ ಗೃಹಖಾತೆಗೆ ಅದರ ಕರಡನ್ನು ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ಜಲ್ಲಿಕಟ್ಟಿಗೆ ಅನುಮತಿ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
 
ಜಲ್ಲಿಕಟ್ಟು ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿ ಇಂದು ತಮಿಳುನಾಡು ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಮರೀನಾ ಸಮುದ್ರತೀರದಲ್ಲಿ ಸೇರಿರುವ ಲಕ್ಷಾಂತರ ಜನರು ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರೆಸಿದ್ದಾರೆ. 
 
ಚಿತ್ರೋದ್ಯಮದ ಸೇರಿದಂತೆ ಎಲ್ಲ ರಂಗದವರು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ್ದು, ಇಂದು ಶೂಟಿಂಗ್ ಸೇರಿದಂತೆ ಚಿತ್ರೋದ್ಯಮ ಸಂಪೂರ್ಣ ಬಂದ್ ಆಗಿದೆ.

ವಿರೋಧ ಪಕ್ಷದ ನಾಯಕ ಸ್ಟಾಲಿನ್ ನೇತೃತ್ವದಲ್ಲಿ ರೈಲ್ ರೋಖೋ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಲಾಗುತ್ತಿದೆ. ಮಾಂಬಲಮ್ ರೈಲು ನಿಲ್ದಾಣದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ