ಜಮ್ಮು ಮತ್ತು ಕಾಶ್ಮೀರ: ಅದ್ದೂರಿ ವಿವಾಹಗಳಿಗೆ ಬಿತ್ತು ಬ್ರೇಕ್

ಬುಧವಾರ, 22 ಫೆಬ್ರವರಿ 2017 (08:17 IST)
ಆಡಂಬರದ, ದುಂದುವೆಚ್ಚದ ಮದುವೆಗೆ ಕಡಿವಾಣ ಹಾಕಬೇಕೆನ್ನುವ ಒತ್ತಡ ದೇಶದಾದ್ಯಂತ ಸಾರ್ವಜನಿಕರಿಂದ ಕೇಳಿ ಬರುತ್ತಲೇ ಇವೆ. ಅನೇಕ ರಾಜ್ಯಗಳಲ್ಲಿ ಇದು ಪ್ರಸ್ತಾವನೆಯ ಹಂತದಲ್ಲಿದೆ. ಕೇಂದ್ರದಲ್ಲೂ ಸಹ ಈ ಮಸೂದೆ ಮಂಡನೆಯಾಗಿದೆ. ಆದರೆ, ಜಮ್ಮು ಕಾಶ್ಮೀರದ ಸರಕಾರ ಅನಿರೀಕ್ಷಿತವಾಗಿ ದುಂದುವೆಚ್ಚದ ವಿವಾಹಕ್ಕೆ ಕಡಿವಾಣ ಹಾಕುವ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆ ನಿಯಮಾವಳಿ ಪ್ರಕಾರ ಹುಡುಗನ ಕಡೆಯಿಂದ 400 ಹಾಗೂ ಹುಡುಗಿ ಕಡೆಯಿಂದ 500 ಜನರನ್ನು ವಿವಾಹೋತ್ಸವಕ್ಕೆ ಕರೆಯಲು ಅವಕಾಶವಿದೆ. ಹಾಗೆಯೇ, ನಿಶ್ಚಿತಾರ್ಥದಂಥ ಕಾರ್ಯಕ್ರಮಗಳಿಗೆ ಎರಡೂ ಕಡೆಯಿಂದ ಕೇವಲ 100 ಅತಿಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಖಾಸಗಿ/ಸರ್ಕಾರಿ ಸಮಾರಂಭಗಳಲ್ಲಿ ಧ್ವನಿ ವರ್ಧಕ ಬಳಕೆ ಮತ್ತು ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಲಾಗಿದೆ. ಜತೆಗೆ, ಇದೇ ಬರುವ ಏಪ್ರೀಲ್ ತಿಂಗಳಿನಿಂದ ವಿವಾಹದ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳಿಗೆ ನೀಡುವಾಗ, ಅದರೊಟ್ಟಿಗೆ ಒಣಹಣ್ಣುಗಳನ್ನು ನೀಡುವಂತಿಲ್ಲ ಎಂದು ತಿಳಿಸಲಾಗಿದೆ.
 
ಕೆಲವು ರಾಜ್ಯಗಳಲ್ಲಿ ಈ ಆಡಂಬರದ ವಿವಾಹದ ಮಸೂದೆ ಜಾರಿಗೆ ತರಬೇಕೋ ಬೇಡವೋ ಎನ್ನುವ ಜಿಜ್ಞಾಸೆಯಲ್ಲಿಯೇ ಇದೆ. ಪರ-ವಿರೋಧಗಳ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು, ಒಟ್ಟಾರೆ ಸಾರ್ವಜನಿಕ ಅಭಿಪ್ರಾಯವೇನೆಂಬುದನ್ನು ಸಹ ಕೆಲ ರಾಜ್ಯಗಳು ಸಂಗ್ರಹಿಸುತ್ತಿವೆ. ಇವುಗಳ ನಡುವೆಯೇ ಜಮ್ಮು-ಕಾಶ್ಮೀರ ಸರಕಾರ ದುಂದುವೆಚ್ಚದ ವಿವಾಹಕ್ಕೆ ಕಡಿವಾಣ ತಂದಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಅಲ್ಲದೆ, ಈ ಕುರಿತಾದ ಮಸೂದೆಯು ಲೋಕಸಭೆಯ ಬಜೆಟ್ ಅಧಿವೇಶನದ ದ್ವಿತೀಯ ಚರಣದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ