ಜ್ವರ ಮತ್ತು ನಿರ್ಜಲೀಕರಣಕ್ಕೊಳಗಾಗಿ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ. ಜತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ವದಂತಿಗಳನ್ನು ಅಲ್ಲಗಳೆದಿವೆ.
ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಲಲಿತಾ ಸೆಪ್ಟೆಂಬರ್ 22ರಂದು ನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಕಿಡ್ನಿ ಸಮಸ್ಯೆ ಮತ್ತು ಅಧಿಕ ಮಧುಮೇಹದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಅವರು ವಿದೇಶಕ್ಕೆ ಹೋಗುತ್ತಿರುವ ಸುದ್ದಿ ಕೇವಲ ವದಂತಿ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರೇ ಖಚಿತ ಪಡಿಸಿದ್ದಾರೆ.