ಜಯಲಲಿತಾ ಅನಾರೋಗ್ಯ: ಆಸ್ಪತ್ರೆ ಮುಂದೆ ದಿಗ್ಗಜರ ಸಾಲು, ಯಜ್ಞ, ಹೋಮ ಹವನ

ಸೋಮವಾರ, 10 ಅಕ್ಟೋಬರ್ 2016 (13:03 IST)
ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ರಾಜಕೀಯ ನಾಯಕರು ಅವರು ದಾಖಲಾಗಿರುವ ಅಪೋಲೋ ಆಸ್ಪತ್ರೆಯ ಮುಂದೆ ಸಾಲುಗಟ್ಟಿದ್ದಾರೆ. 

ಜತೆಗೆ ಅವರ ಆರೋಗ್ಯ ಸುಧಾರಿಸಲೆಂದು ರಾಜ್ಯಾದ್ಯಂತ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತಿದೆ. 
 
ಪಾಂಡಿಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಭಾನುವಾರ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಜಯಾ ಆರೋಗ್ಯವನ್ನು ವಿಚಾರಿಸಿದರು. 
 
ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಮೊದಲಿನಂತಾಗಿ, ದೈನಂದಿನ ಕೆಲಸಕ್ಕೆ ಹಾಜರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. 
 
ತಮಿಳುನಾಡು ಮನಿಲಾ ಕಾಂಗ್ರೆಸ್ ಮುಖ್ಯಸ್ಥ ಜಿ.ಕೆ. ವಾಸನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ನಿರ್ದೇಶಕರು ಮತ್ತು ರಾಜ್ಯ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ. ಆಕೆಯ ಆರೋಗ್ಯದಲ್ಲಿ ಚೇತರಿಗೆ ಕಂಡು ಬಂದಿದೆ ಎಂದು ಮಾಹಿತಿ ಲಭಿಸಿದೆ ಎಂದು ಅವರು ತಿಳಿಸಿದ್ದಾರೆ. 
 
ಸಿಪಿಐ ನಾಯಕ, ರಾಜ್ಯ ಸಭಾ ಸಂಸದ ಡಿ.ರಾಜಾ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಜಯಾ ಆರೋಗ್ಯ ವಿಚಾರಿಸಿದ್ದಾರೆ. 
 
ಇನ್ನೊಂದೆಡೆ ಜಯಾ ಆರೋಗ್ಯ ಸುಧಾರಿಸಲೆಂದು ರಾಜ್ಯಾದ್ಯಂತ ವಿಶೇಷ ಪೂಜೆ, ಹೋಮಹವನಗಳು ನಡೆಯುತ್ತಿವೆ. ಚರ್ಚ್‌ಗಳಲ್ಲಿ ಕೂಡ ಜಯಾ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಯುತ್ತಿವೆ. 
 
ಕಳೆದ ಸೆಪ್ಟೆಂಬರ್ 22 ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಯಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ನಿಖರ ಸುದ್ದಿಗಳು ಹೊರ ಬರುತ್ತಿಲ್ಲ. ಹೀಗಾಗಿ ಊಹಾಪೋಹಗಳು ಹರಿದಾಡುತ್ತಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ