ಆಸ್ಪತ್ರೆಯಲ್ಲಿ ಅಮ್ಮನಿಂದ ಬ್ಯೂಟಿ ಟಿಪ್ಸ್ : ನೆನಪಿಸಿಕೊಂಡ ಅಪೋಲೋ ವೈದ್ಯಕೀಯ ಸಿಬ್ಬಂದಿ

ಗುರುವಾರ, 8 ಡಿಸೆಂಬರ್ 2016 (17:11 IST)
ತಮಿಳುನಾಡು ಸಿಎಂ ಜೆ. ಜಯಲಲಿತಾ ಕೊನೆಯುಸಿರೆಳೆದು ಮೂರು ದಿನಗಳಾದರೂ ಅವರ ಅಭಿಮಾನಿಗಳ ಗೋಳಾಟ ಮಾತ್ರ ಇನ್ನು ನಿಂತಿಲ್ಲ. ಅಣ್ಣಾ ಡಿಎಂಕೆ ನಾಯಕಿಯ ಕೊನೆಯ ದಿನಗಳಲ್ಲಿ ಜತೆಗಿದ್ದ ಅಪೋಲೋ ಆಸ್ಪತ್ರೆ ಸಿಬ್ಬಂದಿ ಅವರೊಂದಿಗೆ ಕಳೆದ 75ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ಜತೆ ಪ್ರೀತಿಯಿಂದ ಮಾತನ್ನಾಡುತ್ತಿದ್ದ ಅಮ್ಮ ಬ್ಯೂಟಿ ಟಿಪ್ಸ್‌ಗಳನ್ನು ಸಹ ಹೇಳಿಕೊಟ್ಟಿದ್ದರು ಎಂದು ನರ್ಸ್ ಒಬ್ಬರು ಹೇಳುತ್ತಾರೆ. 
68 ವರ್ಷದ ಜಯಾ ಸೆಪ್ಟೆಂಬರ್ 22 ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯವನ್ನು ವಿಚಾರಿಸಿಕೊಳ್ಳಲು 16 ನರ್ಸ್‌ಗಳನ್ನು ಮೂರು ಶಿಫ್ಟ್‌ಗಳಲ್ಲಿ ನೇಮಿಸಲಾಗಿತ್ತು. ಅವರಲ್ಲಿ ಸಿ.ವಿ ಶೀಲಾ, ಎಮ್.ವಿ ರೇಣುಕಾ ಮತ್ತು ಸಮುಂದೀಶ್ವರಿ ಎನ್ನುವವರು ಜಯಾ ಅವರ ಮೆಚ್ಚಿನ ನರ್ಸ್‌ಗಳಾಗಿದ್ದರು. 
 
ಅವರಲ್ಲಿ ಒಬ್ಬರಾದ ಶೀಲಾ, ಹಳೆಯ ದಿನಗಳನ್ನು ನೆನಪಿಸಿ ಕೊಳ್ಳುತ್ತಾರೆ: ನಾವು ಅವರನ್ನು ದಾಖಲಿಸಲಾದ ಕೋಣೆಯೊಳಕ್ಕೆ ಹೋದಾಗ ನಕ್ಕು ಸ್ವಾಗತಿಸುತ್ತಿದ್ದ ಅವರು, ಒಳ ಹೋಗುತ್ತಿದ್ದಂತೆ ಮಾತನಾಡಲು ಪ್ರಾರಂಭಿಸುತ್ತಿದ್ದರು. ಎಲ್ಲದಕ್ಕೂ ಸಹಕರಿಸುತ್ತಿದ್ದರು. ನಾವು ಅವರ ಜತೆಗಿದ್ದಾಗ ಕಷ್ಟವಾದರೂ ಆಹಾರ ಸೇವಿಸಲು ಪ್ರಯತ್ನಿಸುತ್ತಿದ್ದರು. ನಮ್ಮೆಲ್ಲರಿಗಾಗಿ ಒಂದೊಂದು ಚಮಚ ಮತ್ತು ತನಗಾಗಿ ಒಂದು ಚಮಚ ಆಹಾರವನ್ನು ಸೇವಿಸುತ್ತಿದ್ದರು. ನಾನೇನು ಮಾಡಬೇಕು ಎಂದು ಹೇಳಿ, ಮಾಡುತ್ತೇನೆ ಎನ್ನುತ್ತಿದ್ದರು.
 
ಅವರು ತಮ್ಮ ಅಡುಗೆಯವರು ತಯಾರಿಸಿದ ಉಪ್ಮಾ, ಪೊಂಗಲ್, ಮೊಸರನ್ನ, ಆಲೂಗಡ್ಡೆ ಕರಿಯನ್ನು ಸೇವಿಸುತ್ತಿದ್ದರು.
 
ಸೆಪ್ಟೆಂಬರ್ 22 ರ ರಾತ್ರಿ ಅವರು ತುರ್ತು ಚಿಕಿತ್ಸಾ ಕೋಣೆಗೆ ಕರೆ ತಂದ ಬಳಿಕ ಸತತ ನಾಲ್ಕು ಗಂಟೆ ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ಆಗ ಅವರು ಕೆಲವು ಸ್ಯಾಂಡ್‌ವಿಚ್ ಮತ್ತು ಕಾಫಿಯನ್ನು ಕೇಳಿದರು ಎಂದು ಮತ್ತೊಬ್ಬ ನರ್ಸ್ ನೆನಪಿಸಿಕೊಳ್ಳುತ್ತಾರೆ.

ವೆಬ್ದುನಿಯಾವನ್ನು ಓದಿ