ಜ್ಞಾನವಾಪಿ ಕೇಸ್ : ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ

ಗುರುವಾರ, 1 ಜೂನ್ 2023 (12:17 IST)
ಲಕ್ನೋ : ವಾರಣಾಸಿ ಜ್ಞಾನವಾಪಿ ಮಸೀದಿಯ ಒಳಗಡೆ ಪೂಜೆ ಮಾಡುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ್ದ ಸಿವಿಲ್ ಅರ್ಜಿಯನ್ನು ಪ್ರಶ್ನಿಸಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
 
ರಾಖಿಸಿಂಗ್ ಸೇರಿ ಐವರು ಮಹಿಳೆಯರು ಮಸೀದಿ ಆವರಣದಲ್ಲಿ ಇದೆ ಎನ್ನಲಾಗುತ್ತಿರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಾರಣಾಸಿ ಜಿಲ್ಲಾ ನ್ಯಾಯಾಲಯ 2022ರ ಸೆಪ್ಟೆಂಬರ್ನಲ್ಲಿ ಈ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ತೀರ್ಪು ಪ್ರಕಟಿಸಿತ್ತು.

ಈ ಆದೇಶವನ್ನು ಅಂಜುಮಾನ್ ಇಂತಾಜಾಮಿಯಾ ಮಸೀದಿ ಸಮಿತಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ವಾದ ಪ್ರತಿವಾದವನ್ನು ಅಲಿಸಿದ್ದ ಜೆಜೆ ಮುನೀರ್ ಅವರಿದ್ದ ಪೀಠ ಕಳೆದ ಡಿಸೆಂಬರ್ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಹೈಕೋರ್ಟ್ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಹಿಂದೂ ಮಹಿಳೆಯರ ಪರ ವಾದ ಮಂಡಿಸಿದ ವಕೀಲ ಹರಿಶಂಕರ್ ಜೈನ್ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿ, ಇದೊಂದು ದೊಡ್ಡ ಗೆಲುವು ಮತ್ತು ಮೈಲಿಗಲ್ಲು. ಪ್ರಸ್ತುತ ಇರುವ ರಚನೆಯನ್ನು ತೆಗೆದು ನಾವು ಅಲ್ಲಿ ಭವ್ಯವಾದ ಶಿವ ದೇವಾಲಯವನ್ನು ನಿರ್ಮಿಸುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ