ಉತ್ತರ ಪ್ರದೇಶದ 62 ವರ್ಷದ ಅಶೋಕ್ ರಾಣ ಮತ್ತು ಅವರ ಪತ್ನಿ, 55 ವರ್ಷದ ನಿರ್ಮಲಾ ದೇವಿ ತಮ್ಮ ಅನಾರೋಗ್ಯ ಪೀಡಿತ ಮಗನಿಗೆ ದಯಾಮರಣಕ್ಕೆ ಅವಕಾಶ ನಿಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಕಳೆದ 12 ವರ್ಷಗಳಿಂದ ಮಗ ಜೀವಂತ ಶವವಾಗಿದ್ದಾನೆ.
ತಮ್ಮ ವೃತ್ತಿ ಜೀವನದಲ್ಲಿ ಈ ಅಪರೂಪದ ಕೇಸ್ ತೀರ್ಪು ನೀಡಿದ ಜಸ್ಟಿಸ್ ಚಂದ್ರಚೂಡ್ ಈ ವೃದ್ಧ ದಂಪತಿಗೆ ಮಗನಿಗೆ ಚಿಕಿತ್ಸೆ ಕೊಡಿಸಲು ಉತ್ತರ ಪ್ರದೇಶ ಸರ್ಕಾರದಿಂದಲೇ ಸಹಾಯ ಮಾಡಿಕೊಡಲು ಆದೇಶ ನೀಡಿದ್ದಾರೆ. ಇದರಿಂದಾಗಿ ಸರ್ಕಾರವೇ ಆತನ ವೈದ್ಯಕೀಯ ವೆಚ್ಚವನ್ನು ಭರಿಸಲಿದೆ. ಒಂದು ವೇಳೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಕಷ್ಟವಾದರೆ ಆತನನ್ನು ನೋಯ್ಡಾದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲೂ ಜಸ್ಟಿಸ್ ಚಂದ್ರಚೂಡ್ ಆದೇಶ ನೀಡಿದ್ದಾರೆ. ಅವರ ಈ ತೀರ್ಪಿನಿಂದಾಗಿ ವೃದ್ಧ ದಂಪತಿ ಕೊಂಚ ಸಮಾಧಾನ ಪಡುವಂತಾಗಿದೆ.