ವಕೀಲ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ಸಿಬಿಐಗೆ ಒಪ್ಪಿಸಲು ಕೇಂದ್ರ ಸಿದ್ಧ

ಶುಕ್ರವಾರ, 6 ಮೇ 2016 (15:57 IST)
ಕೇರಳದ ಪೆರಂಬವೂರ್‌ನಲ್ಲಿ ನಡೆದ 30 ವರ್ಷದ ವಕೀಲ ವಿದ್ಯಾರ್ಥಿನಿಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. 

ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಲ್ಲಂನಲ್ಲಿ ಚುನಾವಣಾ ಪ್ರಚಾರ ಆರಂಭಿಸಿ ಮಾತನಾಡುತ್ತಿದ್ದ ಸಿಂಗ್, ಈ ಘೋರ ಕೊಲೆಯನ್ನು ಸಿಬಿಐಗೆ ಒಪ್ಪಿಸುವುದು ಅಗತ್ಯ. ಈ ಕುರಿತಂತೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರೆ ಸಿಬಿಐ ತನಿಖೆಗೆ ಆದೇಶಿಸಲು ನಾವು ಸಿದ್ಧರಿದ್ದೇವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. 
 
ಪೆರಂಬವೂರ್‌ನಲ್ಲಿ ನಡೆದ ವಕೀಲ ವಿದ್ಯಾರ್ಥಿನಿ ಅಮಾನುಷ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 12 ಜನ ಶಂಕಿತರನ್ನು ಬಂಧಿಸಲಾಗಿದೆ. ಅವರಲ್ಲಿ ಮೃತಳ ನೆರೆಮನೆವಾಸಿ ಸಹ ಸೇರಿದ್ದಾನೆ. 
 
ಪೊಲೀಸರ ವಶದಲ್ಲಿರುವ ಇತರ ಶಂಕಿತರಲ್ಲಿ ಇಬ್ಬರು ಅಲೆಮಾರಿ ಕೂಲಿಕಾರ್ಮಿಕರಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. 
 
30 ಸದಸ್ಯರ ತನಿಖಾ ತಂಡದ ಜತೆ ಗುರುವಾರ ರಾತ್ರಿ ಸಭೆ ನಡೆಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಟಿ.ಪಿ ಸೇನ್ ಕುಮಾರ್ ತಿಳಿಸಿದ್ದಾರೆ.
 
ಎಪ್ರಿಲ್ 28 ರಂದು ನಡೆದ ಈ ಹತ್ಯೆಯನ್ನು 2012ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರಕ್ಕೆ ಹೋಲಿಸಲಾಗುತ್ತಿದ್ದು ಯುವತಿಯ ಕುತ್ತಿಗೆ, ಎದೆ ಮತ್ತು ಅನೇಕ ಕಡೆಗಳಲ್ಲಿ 13 ಗಾಯದ ಗುರುತುಗಳು ಮತ್ತು ಕುತ್ತಿಗೆ ಹಿಸುಕಿದ ಗುರುತುಗಳಿವೆ ಎಂದು ಎರ್ನಾಕುಲಮ್ ವಿಭಾಗ ಐಜಿ ಮಹಿಪಾಲ್ ಯಾದವ್ ತಿಳಿಸಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಆಕೆಯ ದೇಹದಲ್ಲಿ 30 ಗಾಯದ ಗುರುತುಗಳಿವೆ.
 
ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 12 ದಿನಗಳು ಬಾಕಿ ಇದ್ದು ಈ ಬರ್ಬರ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚು ಚರ್ಚೆಗೊಳಪಡುತ್ತಿರುವ ವಿಷಯವಾಗಿ ಮಾರ್ಪಟ್ಟಿದೆ. 
 
ಹತ್ಯೆಗೈಯ್ಯಲ್ಪಟ್ಟ ಯುವತಿಯ ಕುಟುಂಬವನ್ನು ಪ್ರಧಾನಿ ಮೋದಿ ಮೇ 11 ರಂದು ಭೇಟಿ ಮಾಡಲಿದ್ದಾರೆ. ಸಾಮಾಜಿಕ ನ್ಯಾಯ ಖಾತೆ ಸಚಿವ ಥಾವರ್ ಗೆಹ್ಲೋಟ್ ಸಹ ಬಲಿಪಶುವಿನ ಕುಟುಂಬವನ್ನು ಭೇಟಿ ಮಾಡಲಿದ್ದರೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ