ನವದೆಹಲಿ: ಕಾವೇರಿ ನೀರು ಹರಿಸಲು ಒತ್ತಡ ಹೇರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡಿಗೆ ಕಾನೂನು ಮಾರ್ಗದಲ್ಲೇ ತಿರುಗೇಟು ನೀಡಲು ಕರ್ನಾಟಕ ಪ್ರಯತ್ನ ಆರಂಭಿಸಿದೆ. ಬಾಕಿ ನೀರು ಹರಿಸುವಂತೆ ತಮಿಳುನಾಡು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಅನುಮತಿ ನೀಡುವಂತೆ ಕರ್ನಾಟಕ ಸಹ ಅರ್ಜಿ ಸಲ್ಲಿಸಿದೆ.
ಈ ಎರಡು ಅರ್ಜಿಗಳನ್ನು ಸೋಮವಾರ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಲಾಯಿತು. ಪ್ರಕರಣವನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು. ಕರ್ನಾಟಕದ ಅರ್ಜಿಯನ್ನು ಪರಿಗಣಿಸಬೇಕು ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ಮನವಿ ಮಾಡಿದರು. ಎರಡು ಬದಿಯ ಮನವಿ ಆಲಿಸಿ ಪ್ರತ್ಯೇಕ ಪೀಠ ರಚಿಸುವುದಾಗಿ ಸಿಜೆಐ ತಿಳಿಸಿದ್ದಾರೆ.
ಜೂನ್, ಜುಲೈ ನೀರು ಬಿಡದೇ ಕರ್ನಾಟಕ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಅಗಸ್ಟ್ ತಿಂಗಳ ನೀರು ಸೇರಿಕೊಳ್ಳಲಿದೆ. ನಿಗದಿತ ಪ್ರಮಾಣದಲ್ಲಿ ನೀರು ಬಿಡುತ್ತಿಲ್ಲ. ಸಂಕಷ್ಟ ಸೂತ್ರವನ್ನು ಕರ್ನಾಟಕ ಪರಿಗಣಿಸುತ್ತಿಲ್ಲ. ಈ ಹಿನ್ನಲೆ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.