ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲಿ ಪುಸ್ತಕ ಓದುವುದು, ಧ್ಯಾನ ಮಾಡುವುದರೊಂದಿಗೆ ತಮ್ಮ ದಿನವನ್ನು ಕಳೆಯುತ್ತಿದ್ದಾರೆ ಎಂದು ಜೈಲಿನ ಮೂಲದಿಂದ ತಿಳಿದುಬಂದಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್ ಅವರು ಬೆಳಗ್ಗೆ ಬೇಗನೆ ಎದ್ದು ತನ್ನ ಕೋಣೆಯನ್ನು ಸ್ವಚ್ಛ ಮಾಡಿ ಯೋಗ ಮಾಡುತ್ತಾರೆ. ಬೆಳಗ್ಗಿನ ಉಪಹಾರಕ್ಕೆ ಟೀ ಜತೆ ಎರಡು ಬ್ರೆಡ್ ಸೇವಿಸುತ್ತಾರೆ. ನಂತರ ಜೈಲು ಕೋಣೆಯ ಹೊರಾಂಗಣದ ಸುತ್ತಾ ನಡೆಯುತ್ತಾರೆ.
ಇನ್ನೂ ಬಂಧಿಯಾಗಿರುವ ಅರವಿಂದ್ ಅವರು ಗೊಂದಲ್ಲಿದ್ದು, ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಜೈಲಿನ ಮೂಲದಿಂದ ತಿಳಿದುಬಂದಿದೆ.
ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ತಪಾಸಣೆಯನ್ನು ಅವರ ವೈದ್ಯರು ದಿನದಲ್ಲಿ ಎರಡು ಬಾರಿ ಮಾಡುತ್ತಾರೆ. ತೂಕ ತಪಾಸಣೆ , ರಕ್ತದೊತ್ತಡ ಮತ್ತು ಶುಗರ್ ಟೆಸ್ಟ್‌ಅನ್ನು ಮಾಡುತ್ತಾರೆ
55ರ ಹರೆಯದ ದೆಹಲಿ ಮುಖ್ಯಮಂತ್ರಿಗೆ ತಮ್ಮ ಸೆಲ್‌ನ ಹೊರಗೆ ನಡೆಯಲು ಅವಕಾಶ ನೀಡಲಾಗಿದೆ. ಭದ್ರತೆಯೊಂದಿಗೆ ಇತರ ಕೈದಿಗಳ ಜತೆ ಮಾತುಕತೆಗೆ ಅವಕಾಶವನ್ನು ಕಲ್ಪಿಸಿಲ್ಲ.
ಏಷ್ಯಾದ ಅತಿದೊಡ್ಡ ಜೈಲಿನಲ್ಲಿ ಬಂಧಿಯಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲು ಸಂಖ್ಯೆ 2 ರ ಸಾಮಾನ್ಯ ವಾರ್ಡ್ ಸಂಖ್ಯೆ 3 ರಲ್ಲಿ 14x8 ಅಡಿ ಕೊಠಡಿಯಲ್ಲಿ ಇರಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ ದಿನದ ಬಹುಪಾಲು ಪುಸ್ತಕಗಳನ್ನು ಓದುತ್ತಾರೆ ಮತ್ತು ಯೋಗ ಮಾಡುತ್ತಾರೆ ಮತ್ತು ದಿನಕ್ಕೆ ಎರಡು ಬಾರಿ ಧ್ಯಾನ ಮಾಡುತ್ತಾರೆ.