ದುಬೈ: ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿನ್ನ ಕಳ್ಳ ಸಾಗಣಿಕೆ ಕೇಸ್ ನಲ್ಲಿ ಸ್ವಪ್ನ ಸುರೇಶ್ ಎಂಬಾಕೆ ಸಿಕ್ಕಿಬಿದ್ದಿದ್ದರು. ಇದೀಗ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ರನ್ಯಾ ರಾವ್ ಹಿಂದೆಯೂ ಪ್ರಭಾವಿಗಳಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಕೇರಳದ ರಾಜಕೀಯದಲ್ಲಿ ಸ್ವಪ್ನ ಸುರೇಶ್ ಕೇಸ್ ಭಾರೀ ಕೋಲಾಹಲವೆಬ್ಬಿಸಿತ್ತು. ಈ ಪ್ರಕರಣ ಕೇರಳ ಸರ್ಕಾರಕ್ಕೆ ತೀವ್ರ ಮುಜುಗರವುಂಟು ಮಾಡಿತ್ತು. ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಹೆಸರೂ ಕೇಳಿಬಂದಿತ್ತು. ಕೇರಳ ಸಿಎಂ ಪಿಣರಾಯಿ ಒಂದು ಚೀಲದಲ್ಲಿ ನಗದು ಹಣವನ್ನು ಯುಎಇಗೆ ಸಾಗಿಸಿದ್ದರು ಎಂದು ಸ್ವಪ್ನ ಸುರೇಶ್ ಆರೋಪಿಸಿದ್ದರು. ಬಳಿಕ ಸಿಎಂ ವಿರುದ್ಧ ಹೇಳಿಕೆ ನೀಡದಂತೆ ಪಿಣರಾಯಿ ವಿಜಯನ್ ಕೋರ್ಟ್ ಮೊರೆ ಹೋಗಿದ್ದರು.
ಇದೀಗ ರನ್ಯಾ ರಾವ್ ಪ್ರಕರಣದಲ್ಲೂ ಇದೇ ರೀತಿ ಪ್ರಭಾವಿಗಳ ಕೈವಾಡವಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ರನ್ಯಾ ರಾವ್ ಗೂ ಪ್ರಭಾವೀ ರಾಜಕೀಯ ನಾಯಕರ ನಂಟಿತ್ತು ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಯಾರೊಬ್ಬರ ಸಹಾಯವೂ ಇಲ್ಲದೇ ರನ್ಯಾ ಇಷ್ಟು ದೊಡ್ಡ ಮೊತ್ತದ ಚಿನ್ನ ಕಳ್ಳಸಾಗಣಿಕೆ ಮಾಡಲು ಸಾಧ್ಯವಿಲ್ಲ. ಅಲ್ಲದೆ ಆಕೆಯೇ ನನಗೆ ಬೆದರಿಸಿ ಈ ಕೆಲಸ ಮಾಡಿಸಲಾಗಿದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಈಗ ಆಕೆಯ ಹಿಂದೆ ನಿಂತು ಕೆಲಸ ಮಾಡಿಸಿದವರು ಯಾರು ಎಂಬ ತನಿಖೆ ಶುರುವಾಗಿದೆ.