ಅದರಂತೆ ಸರ್ಕಾರ 500 ಟಾಪ್ ಕಂಪನಿಗಳನ್ನು ಈ ಯೋಜನೆಯಲ್ಲಿ ಬಳಸಿಕೊಳ್ಳಲಿದೆ. ಇನ್ನೂ ಉದ್ಯೋಗ ಅರಸುತ್ತಿರುವ 21 ರಿಂದ 24 ವರ್ಷದೊಳಗಿನ ಯುವಕ/ಯುವತಿಯರಿಗೆ ಈ ಕಂಪನಿಗಳಲ್ಲಿ ಪ್ರಾಯೋಗಿಕವಾಗಿ ಉದ್ಯೋಗ ತರಬೇತಿ ನೀಡುವುದು ಯೋಜನೆಯ ಭಾಗವಾಗಿದೆ. ಅವರಿಗೆ ಮಾಸಿಕವಾಗಿ 5,000 ರೂ. ಮತ್ತು ವರ್ಷಕ್ಕೆ ಒಟ್ಟು 66,000 ರೂ. ಭತ್ಯೆ ಸಿಗಲಿದೆ. ಕಂಪನಿಗಳೂ ಉದ್ಯೋಗ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗೆ ತರಬೇತಿ ಜೊತೆಗೆ ಹೆಚ್ಚುವರಿಯಾಗಿ 6,000 ರೂ. ನೀಡಬೇಕಾಗುತ್ತದೆ. ಈ ಮೂಲಕ ಕೌಶಲ್ಯ ತರಬೇತಿ ಜೊತೆಗೆ ಪ್ರೋತ್ಸಾಹ ಧನವೂ ಸಿಗಲಿದೆ.
ಯೋಜನೆಗೆ ಯಾರು ಅರ್ಹರು
ಪದವಿ ಮುಗಿಸಿರುವ ಇನ್ನೂ ಉದ್ಯೋಗ ಅರಸುತ್ತಿರುವ 21 ರಿಂದ 24 ವರ್ಷದೊಳಗಿನ ಯುವ ಸಮೂಹ ಇದಕ್ಕೆ ಅರ್ಹರು. ಅವರು ಯಾವುದೇ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಕುಟುಂಬದ ಇತರೆ ಸದಸ್ಯರು ಸರ್ಕಾರೀ ಉದ್ಯೋಗಿಗಳಾಗಿರಬಾರದು. ಅಭ್ಯರ್ಥಿಗಳು ಐಐಟಿ, ಐಐಎಂ, ಸಿಎ, ಸಿಎಂಎ, ಐಐಎಸ್ಇಆರ್ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ ಮಾಡಿರಬಾರದು. ಒಟ್ಟಾರೆಯಾಗಿ ಆರ್ಥಿಕವಾಗಿ ಹಿಂದುಳಿದ, ಉದ್ಯೋಗ ಗಿಟ್ಟಿಸಿಕೊಳ್ಳಲು ಕಷ್ಟಪಡುವ ವರ್ಗವನ್ನೇ ಗುರಿಯಾಗಿಟ್ಟುಕೊಂಡು ಈ ಯೋಜನೆ ತರಲಾಗಿದೆ.