ಕೋಲ್ಕತ್ತಾ: ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ರೇಪ್ ಆಂಡ್ ಮರ್ಡರ್ ಆದ ಟ್ರೈನಿ ವೈದ್ಯೆ ಬಗ್ಗೆ ಆಕೆಯ ಸಹೋದ್ಯೋಗಿಗಳು ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದು, ಇದು ಈ ಪ್ರಕರಣದ ಹಿಂದೆ ದೊಡ್ಡವರ ಕೈವಾಡವಿರುವ ಬಗ್ಗೆ ಮತ್ತಷ್ಟು ಸಂಶಯ ಹುಟ್ಟುಹಾಕಿದೆ.
ಇನ್ನು, ಆಕೆಯನ್ನು ಸತತ 36 ಗಂಟೆಗಳ ಕಾಲ ಕರ್ತವ್ಯದಲ್ಲಿರುವಂತೆ ಮಾಡಿದ್ದು ಯಾಕೆ? ಈ ರೀತಿ ವಿಶ್ರಾಂತಿಯಿಲ್ಲದೇ ದುಡಿಸಿಕೊಂಡಿರುವುದರ ಹಿಂದೆ ಬೇರೆ ಏನೋ ಕಾರಣವಿರಲೇಬೇಕು ಎಂಬುದು ಅವರ ವಾದ. ಆಕೆಯನ್ನು ಯಾರೋ ದೊಡ್ಡ ಕೈಗಳು ಬೇಕೆಂದೇ ಟಾರ್ಗೆಟ್ ಮಾಡಿವೆ ಎನ್ನುವುದು ಸಹೋದ್ಯೋಗಿಗಳ ಆರೋಪ. ಯಾಕೆಂದರೆ ಆಕೆಗೆ ಡಿಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಯಾವುದೋ ಅವ್ಯವಹಾರದ ಬಗ್ಗೆ ನಮ್ಮೆಲ್ಲರಿಗಿಂತ ಹೆಚ್ಚು ಅರಿವಿತ್ತು. ಅದೇ ಕಾರಣಕ್ಕೆ ಯಾವುದೋ ದೊಡ್ಡ ಕೈಯೇ ಆಕೆಯ ವಿರುದ್ಧ ಸಂಚು ರೂಪಿಸಿದೆ ಎಂಬುದು ಸಹೋದ್ಯೋಗಿಗಳ ಆರೋಪ.
ಇನ್ನು ಸಂತ್ರಸ್ತೆಯ ಪೋಷಕರೂ ಇತ್ತೀಚೆಗೆ ತಮ್ಮ ಮಗಳಿಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗುವುದೇ ಇಷ್ಟವಿರಲಿಲ್ಲ ಎಂದಿದ್ದಾರೆ. ಆಕೆ ಆಸ್ಪತ್ರೆಗೆ ಹೋಗುವುದೆಂದರೇ ಬೇಸರ ವ್ಯಕ್ತಪಡಿಸುತ್ತಿದ್ದಳು. ಸಾವಿನ ಕೆಲವು ದಿನ ಮೊದಲು ನನಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗಬೇಕೆಂದೇ ಅನಿಸುವುದಿಲ್ಲ ಎನ್ನುತ್ತಿದ್ದಳು ಎಂದು ಆಕೆಯ ಪೋಷಕರೂ ಹೇಳಿದ್ದಾರೆ. ಹೀಗಾಗಿ ವೈದ್ಯೆ ರೇಪ್ ಆಂಡ್ ಮರ್ಡರ್ ನ ಹಿಂದೆ ಸಾಕಷ್ಟು ಅನುಮಾನಗಳಿವೆ.