ಕೋಲ್ಕತ್ತಾ: ನಾಳೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿದಂತೆ ಉಳಿದಂತೆ ಯಾವುದೇ ವೈದ್ಯಕೀಯ ಸೇವೆಗಳಿರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ ಘೋಷಣೆ ಮಾಡಿದೆ.
ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಂಘ ನಾಳೆ ಮುಷ್ಕರ ನಡೆಸಲು ತೀರ್ಮಾನಿಸಿದೆ. ಹೀಗಾಗಿ ನಾಳೆ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ ಎಂದಿದೆ.
ಹೀಗಾಗಿ ನಾಳೆ ಆಸ್ಪತ್ರೆಗೆ ತೆರಳುವ ಯೋಜನೆಯಿದ್ದರೆ ಈ ಸೂಚನೆ ಗಮನಿಸಿ. ಈಗಾಗಲೇ ದೇಶದಾದ್ಯಂತ ಘಟನೆಗೆ ಸಂಬಂಧಿಸಿದಂತೆ ವೈದ್ಯಕೀಯ ಕ್ಷೇತ್ರದವರು ಮಾತ್ರವಲ್ಲದೇ ಸಾರ್ವಜನಿಕರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಆರ್ ಜಿ ಕರ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ಹತ್ಯೆ ನಡೆಸಲಾಗಿತ್ತು. ಆಕೆಯ ಮರಣೋತ್ತರ ಪರೀಕ್ಷೆ ವೇಳೆ ಗ್ಯಾಂಗ್ ರೇಪ್ ನಡೆದಿರಬಹುದಾದ ಅನುಮಾನ ಬಂದಿದೆ. ಈ ಪ್ರಕರಣದಲ್ಲಿ ಈಗ ಒಬ್ಬಾತನನ್ನು ಮಾತ್ರ ಬಂಧಿಸಲಾಗಿದೆ. ಇನ್ನೊಂದೆಡೆ ಕೆಲವು ಕಿಡಿಗೇಡಿಗಳ ಗುಂಪು ಆಸ್ಪತ್ರೆಗೆ ದಾಳಿ ನಡೆಸಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡದ ಶಂಕೆ ಶುರುವಾಗಿದೆ. ಇಂದು 12 ಗಂಟೆಗಳ ಕಾಲ ಬಂಗಾಲ ಬಂದ್ ಗೆ ಕರೆ ನೀಡಲಾಗಿದೆ. ನಾಳೆ ವೈದ್ಯರು ದೇಶದಾದ್ಯಂತ ಮುಷ್ಕರ ನಡೆಸಲಿದ್ದಾರೆ.