ಬೆಂಗಳೂರು: ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದಿದ್ದ ರೇಪ್ ಆಂಡ್ ಮರ್ಡರ್ ಪ್ರಕರಣ ಖಂಡಿಸಿ ವೈದ್ಯರು ಇಂದು ಮುಷ್ಕರ ನಡೆಸುತ್ತಿದ್ದು, ಕರ್ನಾಟಕದಲ್ಲೂ ಇಂದು ಈ ಕೆಲವೊಂದು ವೈದ್ಯಕೀಯ ಸೇವೆಗಳು ಲಭ್ಯವಿರುವುದಿಲ್ಲ.
ಕೋಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದಿದ್ದ ರೇಪ್ ಆಂಡ್ ಮರ್ಡರ್ ಪ್ರಕರಣ ಖಂಡಿಸಿ ಅಖಿಲ ಭಾರತೀಯ ವೈದ್ಯರ ಸಂಘ ಇಂದು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಇಂದು ಇಡೀ ದಿನ ದೇಶದಲ್ಲಿ ವೈದ್ಯರು ರೋಗಿಗಳಿಗೆ ಲಭ್ಯರಿರುವುದಿಲ್ಲ.
ಕೆಲವೊಂದು ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಇಂದು ಬಂದ್ ಆಗಿರಲಿದೆ. ಕರ್ನಾಟಕದಲ್ಲೂ ಈ ಪ್ರತಿಭಟನೆಗೆ ವೈದ್ಯರು ಸಹಕಾರ ನೀಡಲಿದ್ದಾರೆ. ಹೀಗಾಗಿ ಇಂದು ಹೆಚ್ಚಿನ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಇರುವುದಿಲ್ಲ.
ಎಂದಿನಂತೆ ಹೊರ ರೋಗಿಗಳ ಚಿಕಿತ್ಸಾ ವಿಭಾಗ ಕಾರ್ಯನಿರ್ವಹಿಸುವುದಿಲ್ಲ. ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ನಡೆಸಲಿದ್ದು, ಒಪಿಡಿ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಇಂದು ವೈದ್ಯಕೀಯ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗದಿರುವುದೇ ಉತ್ತಮ.