ಕೋವಿಡ್ 3ನೇ ಅಲೆ : ಮುನ್ನೆಚ್ಚರಿಕೆ ವಹಿಸುವಂತೆ ಪ್ರಧಾನ ಮಂತ್ರಿ ಕಚೇರಿಗೆ ವರದಿ
ಸೋಮವಾರ, 23 ಆಗಸ್ಟ್ 2021 (15:14 IST)
ನವದೆಹಲಿ, ಆ.23 : ಕೋವಿಡ್ನ ಮೂರನೇ ಅಲೆ ಅಕ್ಟೋಬರ್ನಲ್ಲಿ ತೀವ್ರವಾಗಿ ಹೆಚ್ಚಳವಾಗಲಿದ್ದು, ಮಕ್ಕಳಿಗೆ ತೊಂದರೆ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿವೆ. ಈ ಬಗ್ಗೆ ಈ ಎರಡು ಸಂಸ್ಥೆಗಳು ಪ್ರಧಾನ ಮಂತ್ರಿ ಅವರ ಕಚೇರಿಗೆ ವರದಿ ಸಲ್ಲಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ಮಾಡಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ತಜ್ಞರ ಸಮಿತಿ ನೀಡಿರುವ ವರದಿಯಲ್ಲಿ ವಯಸ್ಕರಿಗಿಂತಲೂ ಮೂರನೆ ಅಲೆ ಮಕ್ಕಳಿಗೆ ತೊಂದರೆ ಮಾಡಬಹುದು ಎಂಬ ಸೂಚನೆ ನೀಡಲಾಗಿದೆ.ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಾದ ವೈದ್ಯಕೀಯ ಸಿಬ್ಬಂದಿ, ಮಕ್ಕಳ ತಜ್ಞರ ನೇಮಕ, ಸೂಕ್ತ ಸಲಕರಣೆಗಳ ಪೂರೈಕೆ ಮಾಡಬೇಕು. ವೆಂಟಿಲೇಟರ್, ಆಯಂಬುಲೇನ್ಸ್ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.
ಭಾರತದಲ್ಲಿ ಈವರೆಗೂ ಮಕ್ಕಳಿಗೆ ಲಸಿಕೆ ಹಾಕದೆ ಇರುವುದರಿಂದ ಅವರಿಗೆ ಅಪಾಯದ ಪ್ರಮಾಣ ಹೆಚ್ಚಿದೆ. ಹಾಗಾಗಿ ಮಕ್ಕಳ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಇತ್ತೀಚೆಗಷ್ಟೆ ಭಾರತ ಔಷಧ ನಿಯಂತ್ರಕ ಮಹಾ ನಿರ್ದೇಶನಾಲಯ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝುಡಾಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಕೊರೊನಾ ಲಸಿಕೆ ನೀಡಲು ಅನುಮತಿಸಿದೆ. ಆದರೆ ಲಸಿಕೆ ನೀಡಿಕೆ ಇನ್ನೂ ಆರಂಭವಾಗಿಲ್ಲ, ಸೆಪ್ಟಂಬರ್ನಿಂದ ಲಸಿಕೆ ನೀಡುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಕ್ ಮಾಂಡವೀಯ ಸುಳಿವು ನೀಡಿದ್ದಾರೆ.
ಮಕ್ಕಳಿಗೆ ಕೊರೊನಾ ತಗುಲಿದಾಗ ಚಿಕಿತ್ಸೆ ನೀಡಲು ಅಗತ್ಯವಾದ ಮಕ್ಕಳ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಬೇಕು. ಮನೆಯಲ್ಲಿ ಚಿಕಿತ್ಸೆಗೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಸೋಂಕಿತ ಮಕ್ಕಳ ಜೊತೆ ಪೋಷಕರು ಉಳಿದುಕೊಳ್ಳಲು ಸುರಕ್ಷಿತ ವ್ಯವಸ್ಥೆ ಮಾಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ ಮೂರನೇ ಅಲೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ ಎಂದು ಇತ್ತೀಚೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು. ಪ್ರತಿ 100 ಮಂದಿ ಸೋಂಕಿತರಲ್ಲಿ 23 ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಅಗತ್ಯವಿದೆ ಎಂಬ ಅಂದಾಜಿದೆ. ಅದಕ್ಕೆ ತಕ್ಕಾ ಹಾಗೆ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಅವರು ಹೇಳಿದ್ದರು.
ಎರಡನೇ ಅಲೆಯ ವೇಳೆ ಆಮ್ಲಜನಕದ ಕೊರತೆಯಿಂದ ಎದುರಾದ ಸಂಕಷ್ಟಗಳಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಮುಂದಿನ ದಿನಗಳಲ್ಲಿ ಆಮ್ಲಜನಕವಷ್ಟೆ ಅಲ್ಲ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳಿಗೂ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.