ಅಕ್ಟೋಬರ್ನಲ್ಲಿ ಕೋವಿಡ್ 3ನೇ ಅಲೆ; ಮೋದಿ ಕಚೇರಿಗೆ ವರದಿ

ಸೋಮವಾರ, 23 ಆಗಸ್ಟ್ 2021 (10:41 IST)
ನವದೆಹಲಿ, ಆಗಸ್ಟ್ 23 : ದೇಶದಲ್ಲಿ ಕೋವಿಡ್ ಸೋಂಕು ಸದ್ಯ ಹತೋಟಿಯಲ್ಲಿದೆ. ಹಲವಾರು ತಜ್ಞರು 3ನೇ ಅಲೆ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ 3ನೇ ಅಲೆ ಬಗ್ಗೆ ವರದಿಯೊಂದನ್ನು ನೀಡಿದೆ.

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್ಐಡಿಎಂ) ಅಕ್ಟೋಬರ್ನಲ್ಲಿ ಕೋವಿಡ್ 3ನೇ ಅಲೆ ಅಪ್ಪಳಿಸುವ ಎಚ್ಚರಿಕೆಯನ್ನು ನೀಡಿದೆ. ಈ ಕುರಿತು ಪ್ರಧಾನಿಗಳ ಕಚೇರಿಗೆ ವರದಿ ಸಹ ಕೊಟ್ಟಿದೆ.
ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡಿರುವ ಸಮಿತಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರಚನೆ ಮಾಡಿದೆ. ಇದೇ ತಜ್ಞರ ಸಮಿತಿ ಅಕ್ಟೋಬರ್ನಲ್ಲಿ ಕೋವಿಡ್ 3ನೇ ಅಲೆ ಪೀಕ್ಗೆ ಹೋಗಲಿದೆ ಎಂದು ವರದಿಯಲ್ಲಿ ಹೇಳಿದೆ.
ವಯಸ್ಕರ ಜೊತೆ ಮಕ್ಕಳು ಸಹ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಅಗತ್ಯ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ತಜ್ಞರ ಸಮಿತಿ ಸಲಹೆಯನ್ನು ನೀಡಿದೆ. ಈ ಮೂಲಕ ದೇಶದಲ್ಲಿ ಕೋವಿಡ್ 3ನೇ ಅಲೆ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಹೊಸ ಆಯಾಮ ಸಿಕ್ಕಿದೆ.
ಪ್ರಧಾನಿ ಕಚೇರಿಗೆ ನೀಡಿರುವ ವರದಿಯಲ್ಲಿ ಕೋವಿಡ್ 3ನೇ ಅಲೆ ಪೀಕ್ಗೆ ಹೋದರೆ ಅದಕ್ಕೆ ಸ್ಪಂದಿಸುವಷ್ಟು ವೈದ್ಯರು, ಸಿಬ್ಭಂದಿ, ವೆಂಟಿಲೇಟರ್, ಅಂಬ್ಯುಲೆನ್ಸ್ ಸೇರಿದಂತೆ ಸದ್ಯಕ್ಕೆ ಇಲ್ಲ ಎಂದು ತಿಳಿಸಿದೆ. ಮಕ್ಕಳಿಗೂ ವ್ಯಾಕ್ಸಿನ್ ನೀಡಬೇಕು, ಅಂಗವಿಕಲರ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೋಂಕು ತಗುಲಿರುವ ಎಲ್ಲಾ ಮಕ್ಕಳಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿಲ್ಲ. ಮನೆಯಲ್ಲಿಯೂ ಚಿಕಿತ್ಸೆ ನೀಡಬಹುದಾಗಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ಗಳಿಗೆ ಎಲ್ಲರ ಭೇಟಿಗೆ ಸಹ ನಿರ್ಬಂಧ ಹೇರಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ 3ನೇ ಅಲೆ ಈಗಾಗಲೇ ನಮ್ಮ ನಡುವೆ ಇದೆ. ಕೆಲವು ರಾಜ್ಯಗಳಲ್ಲಿನ ಪ್ರಕರಣಗಳ ಸಂಖ್ಯೆ ಗಮಿಸಿದರೆ ಇದು ತಿಳಿಯುತ್ತದೆ. ಅಕ್ಟೋಬರ್ನಲ್ಲಿ ಇದು ಪೀಕ್ಗೆ ಹೋಗುವ ಸಾಧ್ಯತೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಕೇರಳದಲ್ಲಿ ಪ್ರತಿನಿತ್ಯ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವುಗಳಲ್ಲಿ ಆರ್ ವ್ಯಾಲ್ಯೂ 1.1ರಷ್ಟಿದೆ. ಇದು ಕೋವಿಡ್ 3ನೇ ಅಲೆ ನಮ್ಮ ನಡುವೆಯೇ ಇರುವುದನ್ನು ತಿಳಿಸುತ್ತಿದೆ. ಯಾವುದೇ ಕಾರಣಕ್ಕೂ ಈ ಸೂಚನೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ