ಚೆನ್ನೈ : ಕೋವಿಡ್-19 ಸೋಂಕಿಗೆ ಹೆದರಿ ಕುಟುಂಬದ ಸದಸ್ಯರೊಂದಿಗೆ ವಿಷ ಸೇವಿಸಿದ ತಾಯಿ ಹಾಗೂ ಆಕೆಯ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.
ಸೋಂಕಿನ ಭಯದಿಂದ ಮಹಿಳೆ, ಆಕೆಯ ತಾಯಿ ಹಾಗೂ ಸಹೋದರರು ಸೇರಿದಂತೆ ಕುಟುಂಬದ 5 ಜನರು ವಿಷ ಸೇವಿಸಿದ್ದಾರೆ. ವಿಷ ಸೇವಿಸಿದವರಲ್ಲಿ ಮೂವರು ಬದುಕುಳಿದಿದ್ದು, ಮಹಿಳೆ ಹಾಗೂ ಆಕೆಯ ಕಂದಮ್ಮ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆ ಜ್ಯೋತಿಕಾ(23)ಳ ತಂದೆ 2021ರ ಡಿಸೆಂಬರ್ ತಿಂಗಳಿನಲ್ಲಿ ಸಹಜ ಸಾವನ್ನಪ್ಪಿದ್ದರು. ಇದರಿಂದ ಇಡೀ ಕುಟುಂಬವೇ ನೊಂದಿತ್ತು. ಜ್ಯೋತಿಕಾ ಕೂಡಾ ತನ್ನ ಪತಿಯಿಂದ ಬೇರ್ಪಟ್ಟು, ಮಗುವಿನೊಂದಿಗೆ ತನ್ನ ತವರು ಮನೆಯಲ್ಲಿ ವಾಸವಿದ್ದಳು.
ಜನವರಿ 8 ರಂದು ಜ್ಯೋತಿಕಾಳಿಗೆ ಕೋವಿಡ್ ಸೋಂಕು ತಗುಲಿರುವ ವಿಷಯ ತಿಳಿದು ಬಂದಿದೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿ, ಅದು ಹರಡುವ ಭೀತಿಯಿಂದ ಮನೆಯವರು ವಿಷ ಸೇವಿಸಿದ್ದಾರೆ.
ವಿಷ ಸೇವಿಸಿದ ವಿಚಾರ ನೆರೆಹೊರೆಯವರಿಗೆ ಮರುದಿನ ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಜ್ಯೋತಿಕಾ ಹಾಗೂ ಆಕೆಯ ಮಗು ಸಾವನ್ನಪ್ಪಿದ್ದಾರೆ.