ಶಕ್ತಿಯೋಜನೆಯ ನಷ್ಟ ತುಂಬಿಸಲು ಬಸ್ ದರ ಏರಿಕೆ

Krishnaveni K

ಭಾನುವಾರ, 14 ಜುಲೈ 2024 (11:27 IST)
ಬೆಂಗಳೂರು: ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದ ಕಾಂಗ್ರೆಸ್ ಗೆ ಈಗ ನಷ್ಟ ತುಂಬಿಸುವುದೇ ದೊಡ್ಡ ತಲೆನೋವಾಗಿದೆ. ಶಕ್ತಿಯೋಜನೆಯಿಂದ ಕೆಎಸ್ ಆರ್ ಟಿಸಿ ನಷ್ಟದಲ್ಲಿದ್ದು ಸದ್ಯದಲ್ಲೇ ಬಸ್ ದರ ಏರಿಕೆ ಮಾಡುವುದಾಗಿ ಕಾಂಗ್ರೆಸ್ ಶಾಸಕರೇ ಸುಳಿವು ನೀಡಿದ್ದಾರೆ.

ಸರ್ಕಾರ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿತ್ತು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಸ್ ದರ ಏರಿಕೆ ಬಗ್ಗೆ ಸುಳಿವು ನೀಡಿದ್ದರು. ಆದರೆ ಅದಾದ ಬಳಿಕ ದರ ಏರಿಕೆ ಪ್ರಸ್ತಾಪ ತಣ್ಣಗಾಗಿತ್ತು. ಇದೀಗ ಸ್ವತಃ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ದರ ಏರಿಕೆಯ ಸುಳಿವು ನೀಡಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಕೆಎಸ್ ಆರ್ ಟಿಸಿ ನಷ್ಟದಲ್ಲಿದೆ. ಬಸ್ ನ ಬಿಡಿ ಭಾಗಗಳ ದರವೂ ಏರಿಕೆಯಾಗಿದೆ. ಕಳೆದ 10 ವರ್ಷಗಳಿಂದ ಬಸ್ ದರ ಏರಿಕೆ ಮಾಡಿಲ್ಲ. ವಾಯವ್ಯ ಸಾರಿಗೆಗೆ ಸೇರಿದ ಹಳೆ ಕಟ್ಟಡಗಳನ್ನು ನವೀಕರಿಸಿ ಬಾಡಿಗೆಗೆ ನೀಡಲಾಗುತ್ತದೆ. ಇದೀಗ ಬಸ್ ದರ ಏರಿಕೆ ಅನಿವಾರ್ಯ ಎಂದಿದ್ದಾರೆ.

ಈಗಾಗಲೇ ಪೆಟ್ರೋಲ್, ಡೀಸೆಲ್ ದರ, ತರಕಾರಿ ದರ ಗಗನಕ್ಕೇರಿದೆ. ಹಾಲಿನ ದರವನ್ನೂ ಇತ್ತೀಚೆಗೆ ಏರಿಕೆ ಮಾಡಲಾಗಿತ್ತು. ಇದೀಗ ಬಸ್ ಪ್ರಯಾಣ ದರವನ್ನೂ ಏರಿಕೆ ಮಾಡಿದರೆ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಈಗಾಗಲೇ ಗ್ಯಾರಂಟಿ ಯೋಜನೆಯಿಂದ ಜನರ ಮೇಲಾಗುತ್ತಿರುವ ಹೊರೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ