ಕೈ' ಬಿಟ್ಟು 'ಕಮಲ' ಹಿಡಿಯುತ್ತಾರಾ ಕುಮಾರ್ ?

ಬುಧವಾರ, 15 ಫೆಬ್ರವರಿ 2017 (15:38 IST)
ರಾಜ್ಯ ರಾಜಕಾರಣದಲ್ಲಿ ವರ್ಣ ರಂಜಿತ ರಾಜಕಾರಣಿ ಎಂದೇಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಸಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಲಿದ್ದಾರೆಯೇ..? ಹೌದೆನ್ನುತ್ತವೆ ಕೆಲವು ಮೂಲಗಳು.

ಕುಮಾರ್ ಬಂಗಾರಪ್ಪ ಸದ್ಯದಲ್ಲೇ ಕಾಂಗ್ರೆಸ್‍ಗೆ ಕೈ ಕೊಟ್ಟು ಕಮಲ ಮುಡಿಗೇರಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಹಪಹಪಿಸುತ್ತಿರುವ ಬಿಜೆಪಿ ಇತರ ಪಕ್ಷದ ನಾಯಕರನ್ನು ಸೆಳೆಯಲು ಕಸರತ್ತು ನಡೆಸುತ್ತಿದೆ. ಕಳೆದ ವರ್ಷದ ಅಂತ್ಯದಿಂದಲೇ ಬಂಗಾರಪ್ಪ ಪುತ್ರ ಕಮಲದ ಕಡೆ ಜಾರುವ ಕುರಿತಾದ ಸುದ್ದಿಗಳು ಹರಿದಾಡುತ್ತಿದ್ದವು. ಮತ್ತೀಗ ಸದ್ಯಕ್ಕೆ ಕಾಂಗ್ರೆಸ್‍ನಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸ್ಥಿತಿಯಲ್ಲಿರುವ ಅವರು ಬಿಜೆಪಿ ಸೇರುವುದು ಖಚಿತ ಎನ್ನಲಾಗುತ್ತಿದೆ. ಈ ಸಂಬಂಧ ಸೊರಬದಲ್ಲಿ ಅವರು ತಮ್ಮ ಬೆಂಬಲಿಗರ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸುತಿದ್ದಾರೆ. 
 
ಜೀವನದುದ್ದಕ್ಕೂ ಸಮಾಜವಾದಿ ಸಿದ್ಧಾಂತವನ್ನೇ ಮೈಗೂಡಿಸಿಕೊಂಡು ಕೋಮುವಾದಿ ಶಕ್ತಿಗಳನ್ನು ವಿರೋಧಿಸುತ್ತಿದ್ದ ಬಂಗಾರಪ್ಪ ಕೊನೆ ಕ್ಷಣದಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಪರಾಭವಗೊಳಿಸಿದ್ದರು. ಅಂದು ತಂದೆಯನ್ನು ಹಿಂಬಾಲಿಸಿಕೊಂಡು ಬಿಜೆಪಿ ಸೇರಿದ್ದ ಕುಮಾರ್ ಕೆಲ ಕಾಲದ ನಂತರ ಮತ್ತೆ ಪಕ್ಷಾಂತರ ಮಾಡಿದ್ದರು.
 
ತಂದೆಯ ನಾಮಬಲದಿಂದ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಕುಮಾರ್, ತದನಂತರ ತಂದೆ ಮತ್ತು ಕಿರಿಯ ಸಹೋದರ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಜತೆ ಮನಸ್ತಾಪ ಬೆಳೆಸಿಕೊಂಡಿದ್ದರು. ಇದು ಅವರ ರಾಜಕೀಯ ಜೀವನಕ್ಕೆ ಮುಳುವಾಗಿ ಪರಿಣಮಿಸಿತ್ತು. 

ಮತ್ತೀಗ ಮರಳಿ ಬಿಜೆಪಿ ಸೇರ ಹೊರಟಿರುವ ಅವರು ರಾಜಕೀಯದಲ್ಲಿ ಯಶಸ್ಸು ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
 

ವೆಬ್ದುನಿಯಾವನ್ನು ಓದಿ