ಲಾಲ್ ಬಹದ್ದೂರ್ ಶಾಸ್ತ್ರಿಯವರು ಹುಟ್ಟಿದ್ದು 1904 ರ ಅಕ್ಟೋಬರ್ 2 ರಂದು. ಜವಹರಲಾಲ್ ನೆಹರೂ ತೀರಿಕೊಂಡ ಬಳಿಕ 1964 ರಲ್ಲಿ ಅವರು ಪ್ರಧಾನಿಯಾಗಿ ಅಧಿಕಾರಕ್ಕೇರಿದರು. ಅವರು ಪೂರ್ಣಾವಧಿ ಮಾಡಿರಲಿಲ್ಲ. ಅವರು ತೀರಿಕೊಂಡಿದ್ದು 1966 ಜನವರಿ 11 ರಂದು. ಅದೂ ವಿದೇಶ ಪ್ರವಾಸದಲ್ಲಿದ್ದಾಗ. ಅವರ ಸಾವು ಹೃದಯಾಘಾತದಿಂದ ಸಂಭವಿಸಿತ್ತು ಎಂದು ಹೇಳಲಾಗಿದೆಯಾದರೂ ಅದರ ಹಿಂದೆ ಇನ್ನೂ ಉತ್ತರ ಸಿಗದ ಅನೇಕ ಪ್ರಶ್ನೆಗಳಿವೆ.
ಈಗೆಲ್ಲಾ ಒಬ್ಬ ಸಾಮಾನ್ಯ ವ್ಯಕ್ತಿ ಸಾವನ್ನಪ್ಪಿದರೇ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಆದರೆ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಹಾಲಿ ಪ್ರಧಾನಿಯಾಗಿದ್ದರು. ಹಾಗಿದ್ದರೂ ಅವರ ಸಾವಿನ ಮರಣೋತ್ತರ ಪರೀಕ್ಷೆ ನಡೆದೇ ಇರಲಿಲ್ಲ. ಇನ್ನು, ಅವರ ದೇಹ ಕೊಂಚ ನೀಲಿ ಬಣ್ಣಕ್ಕೆ ತಿರುಗಿತ್ತು ಎಂಬ ಆರೋಪಗಳೂ ಇತ್ತು. ಹಾಗಿದ್ದರೆ ಅವರ ಸಾವು ಸಹಜವಲ್ಲವೇ ಎಂಬ ಅನುಮಾನ ಮೂಡಿಸುತ್ತದೆ. ಈ ಎರಡು ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ.