ಭಾರತದ ಬ್ಯಾಂಕ್ ಮತ್ತು ಕರೆನ್ಸಿಯನ್ನು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವಾಗಿ ಮಾಡುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಅಲ್ಲದೆ ಹಣಕಾಸು ಸಂಸ್ಥೆಗಳು ನಿರಂತರವಾಗಿ ಉತ್ತಮ ಹಣಕಾಸು ಮತ್ತು ಕಾರ್ಪೊರೆಟ್ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರೆಕೊಟ್ಟಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೆಟ್ ಸಚಿವಾಲಯ ಹಮ್ಮಿಕೊಂಡಿರುವ ವಿಶೇಷ ಸಪ್ತಾಹ ಯೋಜನೆಗೆ ಸೋಮವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಭಾರತ ಈಗಾಗಲೇ ಹಣಕಾಸು ಒಳಗೊಳ್ಳುವಿಕೆಯ ಹಲವು ವೇದಿಕೆಗಳನ್ನು ಸೃಷ್ಟಿಸಿದೆ.
ಇಂಥ ವೇದಿಕೆಗಳ ಗರಿಷ್ಠ ಸದ್ಭಳಕೆ ನಿಟ್ಟಿನಲ್ಲಿ ಅವುಗಳ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ ಇಂಥ ಹಣಕಾಸು ಒಳಗೊಳ್ಳುವಿಕೆಯ ಪರಿಹಾರಗಳನ್ನು ಜಾಗತಿಕ ಮಟ್ಟದಲ್ಲೂ ವಿಸ್ತರಿಸುವ ಕೆಲಸ ಆಗಬೇಕಿದೆ ಕರೆ ಕೊಟ್ಟಿದ್ದಾರೆ.
ನಮ್ಮ ಬ್ಯಾಂಕ್ಗಳು ಮತ್ತು ಕರೆನ್ಸಿಯನ್ನು ಜಾಗತಿಕ ವಹಿವಾಟು ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ನಾವು ಒತ್ತು ನೀಡಬೇಕಿದೆ.