ಮೋದಿ ನೇತೃತ್ವದ ಎನ್‌ಡಿಎ ಎಲ್ಲ ಪಕ್ಷಗಳಿಗಿಂತ ದೊಡ್ಡ ಪಕ್ಷವಾಗಿ ಮೂಡಿ ಬರಲಿದೆ ಎಂದು ಸಮೀಕ್ಷೆ, ಜ್ಯೋತಿಷ್ಯಿಗಳ ಅಂಬೋಣವಾಗಿತ್ತು. ಆದರೆ ನಿರೀಕ್ಷೆಯನ್ನು ದಾಟಿ ಹರಿದ ಮೋದಿಯ ಅಲೆ ತೇಲುತ್ತ, ತೇಲುತ್ತ ದೇಶದ ತುಂಬೆಲ್ಲ ಹರಡಿ, 'ದೇಶಂ ಮೋದಿಮಯಂ' ಮಾಡಿಬಿಟ್ಟಿದೆ. ತಾವು ಕಣಕ್ಕಿಳಿದ ವಡೋದರಾ ಮತ್ತು ವಾರಣಾಸಿ ಎರಡು ಕ್ಷೇತ್ರಗಳಲ್ಲೂ ಮೋದಿ ಅಬ್ಬರದ ಜಯಭೇರಿ ಬಾರಿಸಿದ್ದಾರೆ.
ಅಲ್ಲದೇ ದೇಶದ ಚುನಾವಣಾ ಇತಿಹಾಸದಲ್ಲಿ, ದಾಖಲೆ ನಿರ್ಮಿಸಿ, ಭಾರತೀಯ ಜನತಾ ಪಕ್ಷದ ಬೊಗಸೆಯಲ್ಲಿ ಮೋದಿ ಮೊಗೆ ಮೊಗೆದು ತುಂಬಿರುವ ಗೆಲುವಿನ ಬಳುವಳಿ ಊಹಿಸಲಾಗದ್ದು. ಸಂಪೂರ್ಣ ಮೈತ್ರಿಕೂಟ ಗಳಿಸುವ ಮತಗಳಿಂದ ಸರಕಾರ ರಚಿಸಲು ಕಷ್ಟ ಎಂದು ಹೇಳಲಾಗುತ್ತಿತ್ತು. ಆದರೆ ಅವೆಲ್ಲ ಹೇಳಿಕೆಗಳನ್ನು ಬುಡಮೇಲು ಮಾಡಿದ್ದು... ಕೇವಲ ಮೋದಿ ಎಂಬ ಹೆಸರಿನ ಸುನಾಮಿ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಕಳೆದ ವರ್ಷ ಸಪ್ಟಂಬರ್ ತಿಂಗಳಲ್ಲಿ ಘೋಷಿಸಿದ್ದಾಗಿನಿಂದ ಅವಿಶ್ರಾಂತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದ ಮೋದಿ ಪರಿಶ್ರಮಕ್ಕೆ ತಕ್ಕ ಪ್ರತಿಕ್ರಿಯೆಯಾಗಿ ಅವರಷ್ಟೇ ಅಲ್ಲ, ಅವರ ಪಕ್ಷದ ಕೊರಳಿಗೆ ಅಲಂಕರಿಸಿದ್ದು ಮಹಾನ್ ವಿಜಯದ ಮಾಲೆ.
ತಮ್ಮ ಪ್ರಚಾರ ಸಮಯದಲ್ಲಿ ಮೋದಿ 60 ವರ್ಷಗಳ ಕಾಲ ನೀವು ಈ ದೇಶವನ್ನು ಕಾಂಗ್ರೆಸ್ ಕರದಲ್ಲಿ ಇಟ್ಟಿದ್ದಿರಿ. ಆದರೆ ಪಡೆದಿದ್ದು ಶೂನ್ಯ. ಕಾಂಗ್ರೆಸ್ ನಿಮಗಿತ್ತಿದ್ದು ಭೃಷ್ಟಾಚಾರ, ಹಗರಣ, ಹಣದುಬ್ಬರಗಳ ಬಳುವಳಿಯಷ್ಟೇ. ಒಂದೊಮ್ಮೆ ನೀವು ಈ ದೇಶದ ಜವಾಬ್ದಾರಿಯನ್ನು ನನ್ನ ಕೈಯಲ್ಲಿಟ್ಟರೆ ನಾನು ಕೇವಲ 60 ತಿಂಗಳಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ತೋರಿಸುತ್ತೇನೆ ಎಂಬ ವಾಗ್ದಾನವನ್ನು ಮಾಡಿದ್ದರು.