ಅಯೋಧ್ಯೆ: ಇಡೀ ದೇಶವೇ ಎದಿರು ನೋಡುತ್ತಿದ್ದ, ಇನ್ನು ಕನಸೇನೋ ಎಂದು ಅಂದುಕೊಂಡಿದ್ದ ಆ ಶುಭ ಗಳಿಗೆ ಕೊನೆಗೂ ನನಸಾಗುತ್ತಿದೆ. ಅಯೋಧ್ಯೆಗೆ ಪ್ರಭು ಶ್ರೀರಾಮ ಚಂದ್ರನ ಪುನರಾಗಮನವಾಗುತ್ತಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ಶ್ರೀರಾಮಚಂದ್ರನ ಮಂದಿರ ಇಂದು ಲೋಕಾರ್ಪಣೆಯಾಗುತ್ತಿದೆ. ಇದಕ್ಕಾಗಿ ಇಡೀ ಅಯೋಧ್ಯೆ ನಗರಿಯೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಪ್ರಭು ಶ್ರೀರಾಮಚಂದ್ರನ ಪುನರಾಗಮನಕ್ಕಾಗಿ ಕಾದು ನಿಂತಿದೆ.
ಕೇವಲ ಅಯೋಧ್ಯೆ ಮಾತ್ರವಲ್ಲ, ದೇಶದ ಗಲ್ಲಿ ಗಲ್ಲಿಗಳಲ್ಲಿ ರಾಮನನ್ನು ಸ್ವಾಗತಿಸಲಾಗುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ರಾಮನಿಗೆ ಸ್ವಾಗತ ಫಲಕ ಹಾಕಲಾಗಿದ್ದರೆ, ದೇವಾಲಯಗಳಲ್ಲಿ ರಾಮನಿಗಾಗಿ ವಿಶೇಷ ಪೂಜೆ, ಹವನ ಜೊತೆಗೆ ಭಜನೆ ಮಾಡಿ ರಾಮನನ್ನು ಮತ್ತೆ ಅಯೋಧ್ಯೆಗೆ ಕರೆತರಲಾಗುತ್ತಿದೆ.
ಹೆಚ್ಚಿನ ದೇವಾಲಯಗಳಲ್ಲೂ ಲೋಕಾರ್ಪಣೆಯ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಹಲವು ಸಂಸ್ಥೆಗಳು ಉದ್ಯೋಗಿಗಳಿಗೆ ರಜೆ ನೀಡಿ ರಾಮಮಂದಿರ ಲೋಕಾರ್ಪಣೆಯ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿರುವುದು ವಿಶೇಷ.