ಸುಪ್ರೀಂಕೋರ್ಟ್ ಬಾಗಿಲಿಗೆ 'ಲವ್ ಜಿಹಾದ್'

ಶನಿವಾರ, 28 ಆಗಸ್ಟ್ 2021 (14:40 IST)
ಅಹಮದಾಬಾದ್: ಕಳೆದ ಕೆಲ ವರ್ಷಗಳಿಂದ ಲವ್ ಜಿಹಾದ್ಗೆ ಸಂಬಂಧಿಸಿದಂತೆ ಭಾರಿ ಚರ್ಚೆ ನಡೆಯುತ್ತಿದೆ. ಪ್ರೀತಿಸುವ ನೆಪದಲ್ಲಿ ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿ ನಂತರ ಮದುವೆಯಾಗಿ ಅವರನ್ನು ಮತಾಂತರಗೊಳಿಸಿ ಕೈಕೊಟ್ಟು, ಅವರ ಬಾಳನ್ನು ನರಕ ಮಾಡಲಾಗುತ್ತಿದೆ ಎಂಬ ಆರೋಪಗಳು ಬಹಳ ಕೇಳಿ ಬರುತ್ತಿವೆ.

ಇದರ ಬೆನ್ನಲ್ಲೇ ಮದುವೆಯಾದ ಮೇಲೆ ಬೇರೆ ಧರ್ಮಕ್ಕೆ ಮತಾಂತರ ಮಾಡುವುದನ್ನು ಅಪರಾಧ ಎಂದು ಪರಿಗಣಿಸಿ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಕಾನೂನು ರೂಪಿಸಿವೆ. ಈ ಕಾನೂನಿನ ವಿರುದ್ಧ ಇದಾಗಲೇ ಕೆಲವರು ಸಿಡಿದೆದ್ದಿದ್ದಾರೆ. ಈ ರೀತಿ ಆರೋಪಗಳು ಸತ್ಯಕ್ಕೆ ದೂರವಾದದ್ದು, ಪ್ರಾಪ್ತ ಹೆಣ್ಣುಮಕ್ಕಳಿಗೆ ಧರ್ಮವನ್ನು ಬದಲಿಸುವ ಅಧಿಕಾರ ಇದೆ ಎನ್ನುವುದು ಅವರ ಹೇಳಿಕೆ.
ಇದೇ ಕಾರಣಕ್ಕೆ ಮತಾಂತರ ಕಾಯ್ದೆಗೆ ಸಂಬಂಧಿಸಿದಂತೆ ಇರುವ ಕೆಲವೊಂದು ಸೆಕ್ಷನ್ಗಳ ವಿರುದ್ಧ ಕೆಲವರು ಗುಜರಾತ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಂತರ್ಧರ್ಮೀಯ ಒತ್ತಾಯದ ವಿವಾಹದ ಮೂಲಕ ನಡೆಯುವ ಮತಾಂತರವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಗುಜರಾತ್ ನ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ, 2021 ಜೂ.15 ರಂದು ಜಾರಿಗೆ ಬಂದಿತ್ತು. ಅದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸೆಕ್ಷನ್ಗಳಿಗೆ ಹೈಕೋರ್ಟ್ ತಡೆನೀಡಿದೆ. ಹೈಕೋರ್ಟ್ ಅವರ ಅರ್ಜಿಯನ್ನು ಮಾನ್ಯ ಮಾಡಿ, ಸೆಕ್ಷನ್ಗಳಿಗೆ ತಡೆ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಇದೀಗ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಲವ್ ಜಿಹಾದ್ ತಡೆಗಟ್ಟಲು ಈ ಕಾಯ್ದೆಯನ್ನು ಜಾರಿಗೊಳಿಸುವುದರೊಂದಿಗೆ ರಾಜ್ಯದಲ್ಲಿ ಅಂತರ್ಧರ್ಮೀಯ ವಿವಾಹದ ಮೂಲಕ ಮತಾಂತರ ಮಾಡುವುದು ಅಪರಾಧ ಎಂದು ಕಾನೂನು ರೂಪಿಸಿ ಅಪರಾಧಗಳ ತಡೆಗೆ ಮುಂದಾಗಿತ್ತು. ಆದರೆ ಹೈಕೋರ್ಟ್ ಸೆಕ್ಷನ್ಗಳನ್ನು ತಡೆನೀಡಿರುವುದರಿಂದ ಸರ್ಕಾರ ಜಾರಿಗೆ ತಂದಿರುವ ಕಾನೂನಿಗೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ, ಇದರಿಂದ ಎಷ್ಟೋ ಮುಗ್ಧ ಹಿಂದೂ ಹೆಣ್ಣುಮಕ್ಕಳ ಬಾಳು ನಾಶವಾಗುತ್ತಿದೆ. ಅಪರಾಧ ಮಾಡುವವರಿಗೆ ಇದು ಉತ್ತೇಜನ ನೀಡಿದಂತಾಗುತ್ತದೆ ಎಂದಿರುವ ಸರ್ಕಾರ, ಹೈಕೋರ್ಟ್ ಆದೇಶವನ್ನು ರದ್ದು ಮಾಡುವಂತೆ ಕೋರಿದೆ.
ಸದ್ಯ ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತದೆ ಎಂಬುದರತ್ತ ಎಲ್ಲ ಚಿತ್ತ ಹರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ