ನವದೆಹಲಿ: ಇಂದು ಸಂಸತ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಭಾಷಣ ಮಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಮೋದಿ ಮನ್ ಕೀ ಬಾತ್ ಮಾಡುತ್ತಿದ್ದಾರೆ. ಕೇವಲ ಬರೀ ಬಾಯಿ ಮಾತಿನ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಖರ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೆ ರಾಷ್ಟ್ರಪತಿಗಳ ಭಾಷಣದಲ್ಲೂ ಬರೀ ಕೇಂದ್ರ ಸರ್ಕಾರದ ಹೊಗಳಿಕೆಗಷ್ಟೇ ಸೀಮಿತವಾಗಿದೆ ಎಂದಿದ್ದಾರೆ.
ಅಗ್ನಿವೀರ ಯೋಜನಯಂತಹ ತುಘ್ಲಕ್ ಯೋಜನೆಯಿಂದ ಯುವ ಜನರ ಆತ್ಮಸ್ಥೈರ್ಯವನ್ನೇ ಕುಗ್ಗಿಸಲಾಗಿದೆ. ಮೊದಲು ಅದನ್ನು ತೆಗೆದು ಹಾಕಿ. ಇದರಿಂದ ಯುವ ಜನರ ಭವಿಷ್ಯ ಅತಂತ್ರವಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಿ ಹಿಂದಿನಂತೇ ಸೇನಾ ನೇಮಕಾತಿ ಪದ್ಧತಿಯನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು.
ಇಂದು ಸಂಸತ್ ನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಚುನಾವಣೆಗಳನ್ನು ಸಂವಿಧಾನದ ಆಧಾರದಲ್ಲಿ ಮಾಡಲಾಗುತ್ತದೆ. ಆದರೆ ಕೆಲವರಿಗೆ ಸಂವಿಧಾನ ಕೇವಲ ಚುನಾವಣಾ ವಿಷಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಸ್ಪೀಕರ್, ಉಪ ಸಭಾಪತಿ ಎಂದೆಲ್ಲಾ ಹುದ್ದೆಗಳಿವೆ. ಆದರೆ ಕಳೆದ ಐದು ವರ್ಷಗಳಿಂದ ಉಪ ಸಭಾಪತಿ ಹುದ್ದೆಯನ್ನೇ ಖಾಲಿ ಬಿಡಲಾಗಿದೆ. ವಿರೋಧ ಪಕ್ಷಗಳನ್ನು ಕಡೆಗಣಿಸಲಾಗಿದೆ. ನಂತರ ಕೆಲವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಮೋದಿ ಸರ್ಕಾರಕ್ಕೆ ಚಾಟಿ ಬೀಸಿದರು.
ಇನ್ನು ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಕಳೆದ ಕೆಲವು ವರ್ಷಗಳಿಂದ ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬಿಜೆಪಿ ಬೆಂಬಲಿತ ಆರ್ ಎಸ್ಎಸ್ ಹಿಡಿತದಲ್ಲಿದೆ. ಇಲ್ಲಿ ಉತ್ತಮ ಚಿಂತನೆಗಳಿಗೆ ಬೆಲೆಯೇ ಇಲ್ಲ. ಕೇವಲ ಆರ್ ಎಸ್ಎಸ್ ಸಿದ್ಧಾಂತವನ್ನೇ ತುರುಕಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಆದರೆ ಇದನ್ನು ಕಡತದಲ್ಲಿ ಸೇರಿಸಲು ಸ್ಪೀಕರ್ ಜಗದೀಪ್ ಧನಕರ್ ನಿರಾಕರಿಸಿದರು.