ನಾನು ಮಾತನಾಡಲು ಕೈ ಎತ್ತಿದಾಗ ಸ್ಪೀಕರ್ ಅವಕಾಶ ಕೊಡಬೇಕಿತ್ತು: ಜಗದೀಪ್ ಧನ್ಕರ್ ವಿರುದ್ಧ ಮಲ್ಲಿಕಾರ್ಜು ಖರ್ಗೆ ಆಕ್ರೋಶ

Krishnaveni K

ಶುಕ್ರವಾರ, 28 ಜೂನ್ 2024 (17:38 IST)
ನವದೆಹಲಿ: ನೀಟ್ ಅಕ್ರಮದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸ್ಪೀಕರ್ ಜಗದೀಪ್ ಧನ್ಕರ್ ನಡುವೆ ಇಂದು ಕಿತ್ತಾಟವೇ ನಡೆದಿದೆ.

ನೀಟ್ ಅಕ್ರಮದ ಕುರಿತಾಗಿ ಪ್ರತಿಭಟಿಸಲು ಮಲ್ಲಿಕಾರ್ಜುನ ಖರ್ಗೆ ನೇರವಾಗಿ ಸದನದ ಬಾವಿಗಿಳಿದು ಸ್ಪೀಕರ್ ಗಮನ ಸೆಳೆಯಲು ಯತ್ನಿಸಿದರು. ಈ ವೇಳೆ ಸಿಟ್ಟಿಗೆದ್ದ ಸ್ಪೀಕರ್ ಜಗದೀಪ್ ಧನ್ಕರ್ ಇಂತಹ ಘಟನೆ ಹಿಂದೆಂದೂ ಆಗಿರಲಿಲ್ಲ. ಭಾರತದ ಇತಿಹಾಸಲದಲ್ಲೇ ವಿರೋಧ ಪಕ್ಷದ ನಾಯಕರು ಬಾವಿಗಿಳಿದು ಪ್ರತಿಭಟಿಸಿದ್ದು ಇದೇ ಮೊದಲ ಬಾರಿ ಆಗಿತ್ತು. ಇದು ಶಾಕಿಂಗ್ ಮತ್ತು ಈ ಘಟನೆಯಿಂದ ತನಗೆ ತೀರಾ ನೋವಾಗಿರುವುದಾಗಿ ಧನ್ಕರ್ ಸಿಟ್ಟಿನಿಂದಲೇ ಹೇಳಿದರು. ಗದ್ದಲವೆದ್ದಿದ್ದರಿಂದ ಸದನವನ್ನು ಮುಂದೂಡಿದರು.

ಬಳಿಕ ಮಾಧ್ಯಮಗಳ ಮುಂದೆ ಈ ಬಗ್ಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ’ಇದು ಸಭಾಪತಿಗಳ ತಪ್ಪು. 10 ನಿಮಿಷದಿಂದ ಮಾತನಾಡಲು ಅವಕಾಶ ನೀಡುವಂತೆ ಕೈ ಎತ್ತಿ ಹಿಡಿದಿದ್ದರೂ ಅವಕಾಶ ಕೊಡಲಿಲ್ಲ. ಹೀಗಾಗಿ ನಾನು ಆ ರೀತಿ ಮಾಡಬೇಕಾಯಿತು. ನನ್ನನ್ನು ಹಿಂಬಾಲಿಸಿ ಬೇರೆ ನಾಯಕರು ಬಂದಾಗ ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ನಾನು ಕೈ ಎತ್ತಿ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದಾಗ ಅವರು ನನ್ನ ಬಳಿ ನೋಡಬೇಕಿತ್ತು. ಇದು ನನಗೆ ಅವರು ಮಾಡಿದ ಅವಮಾನ’ ಎಂದು ತಿರುಗೇಟು ನೀಡಿದ್ದಾರೆ.

ನೀಟ್ ವಿಚಾರವಾಗಿ ದೊಡ್ಡ ಅಕ್ರಮವೇ ನಡೆದಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ನಾವು ವಿದ್ಯಾರ್ಥಿಗಳ ಪರವಾಗಿ ಚರ್ಚೆ ಮಾಡೋಣ ಎಂದಿದ್ದೆವು ಅಷ್ಟೇ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ