ನವದೆಹಲಿ: ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ಬಗ್ಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಓದಿದ್ದಾರೆ. ಅವರ ಭಾಷಣ ಕೇಳಿದಾಗ ಮೋದಿ ಇನ್ನೂ ವಾಸ್ತವ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲೇ ಇಲ್ಲಎಂದು ಸ್ಪಷ್ಟವಾಗುತ್ತದೆ. ಜನ ತನ್ನನ್ನು ತಿರಸ್ಕರಿಸಿದ್ದಾರೆಂದು ಮೋದಿ ಇನ್ನೂ ಒಪ್ಪಿಕೊಂಡಿಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮೋದಿಯನ್ನು ಜನ ತಿರಸ್ಕರಿಸಿದ್ದಾರೆ. ಯಾಕೆಂದರೆ ಈ ಬಾರಿ 400 ಪ್ಲಸ್ ಸೀಟುಗಳು ಎನ್ನುತ್ತಿದ್ದ ಮೋದಿಗೆ ಜನ 272 ಸ್ಥಾನಗಳನ್ನೂ ನೀಡದೇ ತಿರಸ್ಕಾರ ಮಾಡಿದ್ದಾರೆ. ಮೋದಿ ಇದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲೇ ಇಲ್ಲ. ಇದನ್ನು ನೋಡಿದರೆ ಮೋದಿ ಇನ್ನೂ ಬದಲಾಗಿಲ್ಲ ಎಂದು ಗೊತ್ತಾಗುತ್ತದೆ. ಆದರೆ ಜನ ಬದಲಾವಣೆ ಬಯಸಿದ್ದರು ಎಂದು ಖರ್ಗೆ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದಲ್ಲಿ ನೀಟ್ ಹಗರಣದ ಬಗ್ಗೆ ವಿವರಣೆಯೇ ಇರಲಿಲ್ಲ. ಮಣಿಪುರ ಹಿಂಸಾಚಾರದ ಬಗ್ಗೆ, ಬೆಲೆ ಏರಿಕೆ ಬಗ್ಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ, ಪಶ್ಚಿಮ ಬಂಗಾಲದಲ್ಲಿ ನಡೆದ ರೈಲು ದುರಂತದ ಬಗ್ಗೆ ಉಲ್ಲೇಖವೇ ಮಾಡಿಲ್ಲ. ರಾಷ್ಟ್ರಪತಿಗಳ ಭಾಷಣದಲ್ಲಿ ಇಂತಹ ಮುಖ್ಯ ವಿಚಾರವನ್ನೇ ಕೈ ಬಿಡಲಾಗಿದೆ ಎಂದು ಖರ್ಗೆ ಟೀಕಿಸಿದ್ದಾರೆ.