ಕೋಲ್ಕೊತ್ತಾ: ಪಶ್ಚಿಮ ಬಂಗಾಲ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹಣೆಗೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೋವೊಂದು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸ್ವತಃ ತೃಣಮೂಲ ಕಾಂಗ್ರೆಸ್ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲೇ ಈ ಫೋಟೋ ಪ್ರಕಟವಾಗಿತ್ತು. ದೀದಿಗೆ ಗಂಭೀರ ಪೆಟ್ಟಾಗಿದೆ. ನಿಮ್ಮ ಪ್ರಾರ್ಥನೆಯಲ್ಲಿ ಅವರನ್ನೂ ಸೇರಿಸಿಕೊಳ್ಳಿ ಎಂದು ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗಿತ್ತು. ದೀದಿ ಹಣೆಯ ಮೇಲೆ ಹರಿಯುತ್ತಿರುವ ರಕ್ತ ನೋಡಿ ಎಲ್ಲರೂ ಗಾಬರಿಯಾಗಿದ್ದಂತೂ ನಿಜ.
ಆದರೆ ಕೆಲವೇ ಕ್ಷಣದಲ್ಲಿ ಇದು ದೀದಿಯ ಗಿಮಿಕ್ ಇರಬೇಕು ಎಂದು ನೆಟ್ಟಿಗರು ಸಂಶಯಿಸಿದ್ದು, ಹಳೆಯ ಫೋಟೋಗಳನ್ನು ಪ್ರಕಟಿಸಿ ಟ್ರೋಲ್ ಮಾಡಿದ್ದಾರೆ. ಹಿಂದೊಮ್ಮೆ ಚುನಾವಣೆ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕಾಲಿಗೆ ಏಟಾಗಿತ್ತು ಎಂದು ಫೋಟೋ ಪ್ರಕಟಿಸಲಾಗಿತ್ತು. ಅವರ ಕಾಲಿಗೆ ಹಾಕಲಾಗಿದ್ದ ಬ್ಯಾಂಡೇಜ್ ನೋಡಿಯೇ ಹಲವರು ಟ್ರೋಲ್ ಮಾಡಿದ್ದರು.
ಇದೀಗ ಮತ್ತೆ ದೀದಿ ಹಣೆಯಿಂದ ರಕ್ತ ಸುರಿಯುವ ಫೋಟೋ ಪ್ರಕಟಿಸಲಾಗಿದೆ. ಇದೆಲ್ಲಾ ಜನರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ಗಿಮಿಕ್ ಎಂದು ನೆಟ್ಟಿಗರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲದೇ ಹೋದರೆ ಚುನಾವಣೆ ಬಂದಾಗಲೇ ಈ ರೀತಿ ದಿಡೀರ್ ಆಗಿ ಗಾಯಗಳಾಗುವುದು ಹೇಗೆ ಎಂದು ಹಲವರು ಟಾಂಗ್ ಕೊಟ್ಟಿದ್ದಾರೆ.
ಮೂಲಗಳ ಪ್ರಕಾರ ಮಮತಾ ಬ್ಯಾನರ್ಜಿ ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಅವರ ಹಣೆಗೆ ಗಾಯವಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣೆಗೆ ಗಾಜಿನ ಶೋಕೇಸ್ ತಗುಲಿದ್ದರಿಂದ ಹಣೆಯಲ್ಲಿ ಗಾಯವಾಗಿದೆ ಎಂದು ಟಿಎಂಸಿ ಮೂಲಗಳಿಂಧ ತಿಳಿದುಬಂದಿದೆ.