ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೇ ಪ್ರಧಾನಿ ಮೋದಿ ನೇತೃತ್ವದ ಸಮಿತಿ ಚುನಾವಣಾ ಆಯೋಗಕ್ಕೆ ನೂತನ ಮುಖ್ಯಸ್ಥರನ್ನು ನೇಮಕ ಮಾಡಿದೆ.
ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಪೈಕಿ ಜ್ಞಾನೇಶ್ ಕುಮಾರ್ ಕೇರಳ ಮೂಲದ ನಿವೃತ್ತ ಐಎಎಸ್ ಅಧಿಕಾರಿ. ಸುಖಬೀರ್ ಸಿಂಗ್ ಪಂಜಾಬ್ ಮೂಲದವರಾಗಿದ್ದಾರೆ. ಒಟ್ಟು 212 ಅಧಿಕಾರಿಗಳ ಹೆಸರು ಸೂಚಿಸಲಾಗಿತ್ತು. ಈ ಪೈಕಿ ಆರು ಮಂದಿಯನ್ನು ಶಾರ್ಟ್ ಲಿಸ್ಟ್ ಮಾಡಿ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
ಆದರೆ ಈ ಆಯ್ಕೆ ಪ್ರಕ್ರಿಯೆ ಬಗ್ಗೆ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾರ್ಟ್ ಲಿಸ್ಟ್ ಮಾಡಲಾದ ಹೆಸರುಗಳನ್ನು ನಮಗೆ ಮೊದಲೇ ತಿಳಿಸಿರಲಿಲ್ಲ. ಕೇವಲ 10 ನಿಮಿಷ ಮೊದಲಷ್ಟೇ ತಿಳಿಸಲಾಗಿದೆ. ಈ ಸಮಿತಿಯಲ್ಲಿ ಹೆಚ್ಚಿನವರು ಆಡಳಿತ ಪಕ್ಷದ ಸದಸ್ಯರೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರೂ ಇರಬೇಕಿತ್ತು. ಅಲ್ಲದೆ 200 ಹೆಸರುಗಳನ್ನು ಹೇಗೆ ಸೂಚಿಸಲಾಗಿದೆ ಎಂಬುದಕ್ಕೂ ಸ್ಪಷ್ಟತೆಯಿಲ್ಲ ಎಂದು ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಅರುಣ್ ಗೊಯೆಲ್ ರಾಜೀನಾಮೆಯ ನಂತರ ಲೋಕಸಭೆ ಚುನಾವಣೆಗೆ ಮೊದಲು ನೂತನ ಚುನಾವಣಾ ಆಯೋಗದ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.