ನೋಟು ನಿಷೇಧ ಕ್ರಮ ವಿಫಲವಾದರೆ ಪ್ರಧಾನಿ ಮೋದಿ ರಾಜೀನಾಮೆ ನೀಡುತ್ತಾರಾ? ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಗೆ ಸವಾಲು ಹಾಕಿದ್ದಾರೆ.
ನೋಟು ನಿಷೇಧದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸಲಾದ ಸಭೆಯಲ್ಲಿ ಉಭಯ ನಾಯಕರು ಪ್ರಧಾನಿ ವಿರುದ್ಧ ಕಿಡಿಕಾರಿದರು.
ಹಣದ ಬಿಕ್ಕಟ್ಟು 50 ದಿನಗಳ ಬಳಿಕವೂ ಸುಧಾರಿಸದಿದ್ದರೆ, ನಾನಿದಕ್ಕೆ ವೈಯಕ್ತಿಕವಾಗಿ ಉತ್ತರಿಸುತ್ತೇನೆ ಎಂದು ಪ್ರಧಾನಿ ವಾಗ್ದಾನ ಮಾಡಿದ್ದರು. ಆದರೆ ಪರಿಸ್ಥಿತಿ ತಿಳಿಯಾಗಿಲ್ಲ. ಮತ್ತೀಗ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಮಮತಾ ಆಗ್ರಹಿಸಿದ್ದಾರೆ.
ಇಂತಹ ದೊಡ್ಡ ನಡೆಯನ್ನಿಡುವ ಮುನ್ನ ಸಂಸತ್ತಿನ ವಿಶ್ವಾಸವನ್ನು ಪಡೆದುಕೊಳ್ಳಬೇಕಿತ್ತು ಎಂದ ಮಮತಾ, ಪ್ರಧಾನಿಯದು ನಿರಂಕುಶಾಧಿಪತ್ಯ ಎಂದು ಜರಿದಿದ್ದಾರೆ.
ನೋಟು ನಿಷೇಧದಿಂದಾಗಿ ದೇಶ 20 ವರ್ಷಗಳಷ್ಟು ಹಿಂದಕ್ಕೆ ಹೋದಂತಾಗಿದೆ. ದೇಶದಲ್ಲಿ ನಿರ್ಮಾಣವಾಗಿರುವುದು ತುರ್ತು ಪರಿಸ್ಥಿತಿ ಅಲ್ಲ, ಸೂಪರ್ ತುರ್ತು ಪರಿಸ್ಥಿತಿ ಎಂದು ಮಮತಾ ಪ್ರತಿಪಾದಿಸಿದ್ದಾರೆ.
ನೋಟು ನಿಷೇಧದ ಬಳಿಕ ದೇಶದ ಜನರು ತೊಂದರೆಯನ್ನೆದುರಿಸುತ್ತಿದ್ದು ಇದಕ್ಕೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.