ಅಮರ್‌ನಾಥ್ ಯಾತ್ರಿಕರ ದಾಳಿಯ ವೇಳೆ ರಕ್ಷಕನಾಗಿ ಬಂದ ಪುಣ್ಯಾತ್ಮ ಯಾರು ಗೊತ್ತಾ?

ಮಂಗಳವಾರ, 11 ಜುಲೈ 2017 (13:31 IST)
ಅಮರ್‌ನಾಥ್ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ ಚಾಲಕ ಸಲೀಂ ಬುದ್ಧಿವಂತಿಕೆಯಿಂದ ವರ್ತಿಸದೆ ಮತ್ತು ಧೈರ್ಯವನ್ನು ತೋರಿಸದಿದ್ದರೆ, ಲಜ್ಜೆಗೆಟ್ಟ ಭಯೋತ್ಪಾದಕ ದಾಳಿಯಲ್ಲಿ ಖಂಡಿತವಾಗಿಯೂ ಪ್ರಯಾಣಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಗುಜರಾತಿನ ಬಸ್ ಚಾಲಕ ಸಲೀಂ ತಮ್ಮ ಜೀವವನ್ನು ಒತ್ತೆಯಿಟ್ಟು ಅಮರನಾಥ್ ಪ್ರಯಾಣಿಕರ ಜೀವವನ್ನು ಉಳಿಸಿದ್ದರಿಂದ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. 
 
ವರದಿಗಳ ಪ್ರಕಾರ, ಅಮರನಾಥ ಮಂದಿರದ ದರ್ಶನ ಮಾಡಿಕೊಂಡು ಹಿಂತಿರುಗುತ್ತಿದ್ದ ಬಸ್ ಪ್ರಯಾಣಿಕರ ಮೇಲೆ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪೊಂದು ದಾಳಿ ಮಾಡಿತು. ಉಗ್ರರ ಗುಂಡಿನ ದಾಳಿಯನ್ನು ಲೆಕ್ಕಿಸದ ಚಾಲಕ ಸಲೀಂ, ಬಸ್‌ನ್ನು ಸುರಕ್ಷಿತವಾದ ಸೇನಾ ನೆಲೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾನೆ. 
 
ಗುಂಡಿನಿಂದ ಗಾಯಗೊಂಡಿದ್ದರೂ ಹೆದರದ ಸಲೀಂ, ಉಗ್ರರು ಬಸ್‌ನೊಳಗೆ ನುಗ್ಗದಂತೆ ಬಸ್‌ನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿದ್ದಾನೆ. ಒಂದು ವೇಳೆ ಬಸ್ ನಿಲ್ಲಿಸಿದಲ್ಲಿ ಉಗ್ರರು ಎಲ್ಲಾ ಪ್ರಯಾಣಿಕರನ್ನು ಹತ್ಯೆ ಮಾಡಬಹುದು ಎನ್ನುವುದನ್ನು ಗಮನಿಸಿ ಬಸ್‌ನ್ನು ಸುಮಾರು ಎರಡು ಕಿ.ಮೀಗಳವರೆಗೆ ಓಡಿಸಿ, ನಂತರ ಸೇನಾಶಿಬಿರದ ಬಳಿ ನಿಲ್ಲಿಸಿದ್ದಾನೆ.
 
ಬಸ್‌ನಲ್ಲಿದ್ದ ಪ್ರಯಾಣಿಕರೊಂದಿಗೆ ಮಾತನಾಡಿದ್ದೇನೆ. ಪ್ರತಿಯೊಬ್ಬರು ಬಸ್ ಚಾಲಕ ಸಲೀಂ ಧೈರ್ಯವನ್ನು ಶ್ಲಾಘಿಸಿದ್ದಾರೆ. ಸುರಕ್ಷಿತ ಸ್ಥಳಕ್ಕೆ ತಲುಪುವವರೆಗೆ ಬಸ್ ನಿಲ್ಲಿಸದೆ ಓಡಿಸಿದ್ದಾನೆ. ಇದರಿಂದ ಅನೇಕ ಜೀವಗಳನ್ನು ಉಳಿಸಿದಂತಾಗಿದೆ ಎಂದು ಕಾಶ್ಮಿರದ ಪೊಲೀಸ್ ಮಹಾನಿರ್ದೇಶಕ ಮುನಿರ್ ಖಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ