ಮೋದಿಯನ್ನೇ ದತ್ತು ಪಡೆಯ ಹೊರಟ ದಂಪತಿ

ಶನಿವಾರ, 25 ಫೆಬ್ರವರಿ 2017 (14:51 IST)
ತಿಂಗಳಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲ ತೊಡಗಿರುವ ಪ್ರಧಾನಿ ಮೋದಿ ಇತ್ತೀಚಿಗೆ ತಾವು ಉತ್ತರ ಪ್ರದೇಶದ ದತ್ತುಪುತ್ರ ಎಂದಿದ್ದರು. ಪ್ರಧಾನಿಯವರ ಈ ಮಾತಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ಅಭಿವೃದ್ಧಿಗೆ ದತ್ತು ಪುತ್ರರ ಅಗತ್ಯವಿಲ್ಲ. ರಾಜ್ಯವನ್ನು ಉದ್ಧಾರ ಮಾಡಲು ಹೊರಗಿನವರು ಬರಬೇಕಿಲ್ಲ ಎಂದಿದ್ದರು. 

ರಾಜಕೀಯ ಉದ್ದೇಶಕ್ಕೆ ಪ್ರಧಾನಿ ಈ ಮಾತನ್ನಾಡಿದ್ದರು. ಅದಕ್ಕೆ ವಿರೋಧ ಪಕ್ಷಗಳಿಂದ ಟೀಕೆಗಳು ಕೇಳಿ ಬಂತು. ಆದರೆ ಪ್ರಧಾನಿ ಅವರ ಈ ಹೇಳಿಕೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಪ್ರಧಾನಿ ಅವರ ಈ ಮಾತುಗಳನ್ನಿಟ್ಟುಕೊಂಡು ಗಾಜಿಯಾಬಾದ್‌'ನ ವೃದ್ಧ ದಂಪತಿಯೊಬ್ಬರು ಮೋದಿ ಅವರನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಮತ್ತು ತಮ್ಮ ಪ್ರಯತ್ನದಲ್ಲಿ ವಿಫಲರಾಗಿ ನಿರಾಶರಾಗಿದ್ದಾರೆ. 
 
79 ವರ್ಷದ ಯೋಗೇಂದರ್ ಪಾಲ್ ಸಿಂಗ್ ಹಾಗೂ ಅತರ್ ಕಾಳಿ ಎಂಬ ದಂಪತಿಯೇ ಮೋದಿ ಅವರನ್ನು ದತ್ತು ಪಡೆಯಲು ಯತ್ನಿಸಿದವರು.
 
ಮೋದಿ ನೀಡಿದ್ದ ‘ದತ್ತು ಮಗ’ ಹೇಳಿಕೆಯನ್ನು ಕೇಳಿ ಈ ದಂಪತಿ, ಗಾಜಿಯಾಬಾದ್‌ನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರಧಾನಿಯನ್ನು ದತ್ತು ಪಡೆಯಲು ಬೇಕಾದ ಅರ್ಜಿ ಸಲ್ಲಿಸಿದರು. ಫೆಬ್ರವರಿ ಫೆ.21ರಂದು ಅವರ ಕಳುಹಿಸಿದ ಅರ್ಜಿ  ತಿರಸ್ಕೃತವಾಗಿ ಮರಳಿ ಬಂದಿದೆ.
 
ಇದರಿಂದ ನೊಂದಿರುವ ಯೋಗೇಂದರ್ ದಂಪತಿ ಮತ್ತೀಗ ಪ್ರಧಾನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ನೀವು ಉತ್ತರ ಪ್ರದೇಶದ ದತ್ತು ಮಗ ಎಂದು ಸಾಬೀತುಪಡಿಸುವ ದಾಖಲೆ ನೀಡಿ’, ಎಂದು ನೋಟಿಸ್‌ನಲ್ಲಿ ಅವರು ಕೇಳಿದ್ದಾರೆ. 
 
ಹರ್ದೋಯ್‌ನಲ್ಲಿ ಫೆಬ್ರವರಿ 17 ರಂದು ಚುನಾವಣಾ ಪ್ರಚಾರ ನಡೆಸುತ್ತಿದ್ದ ಮೋದಿ, ನಾನು ಗುಜರಾತ್‌ನಲ್ಲಿ ಹುಟ್ಟಿದ್ದರೂ ಉತ್ತರ ಪ್ರದೇಶದ ದತ್ತು ಪುತ್ರ. ಯುಪಿ ನನ್ನ ತಂದೆ- ತಾಯಿ. ನಾನು ನನ್ನ ತಂದೆ-ತಾಯಿಗಳಿಗೆ ವಂಚನೆ ಮಾಡುವ ಮಗನಲ್ಲ. ನೀವು ನನ್ನನ್ನು ದತ್ತು ಪಡೆದಿದ್ದೀರಿ. ಹೀಗಾಗಿ ನಿಮಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ, ಎಂದಿದ್ದರು.

ವೆಬ್ದುನಿಯಾವನ್ನು ಓದಿ