ಬೆಂಗಳೂರು: ಅಕ್ಟೋಬರ್ 13 ರಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ ನೀಡಲು ಮುಂದಾಗಿದ್ದಾರೆ. ಆದರೆ ಈ ಔತಣಕೂಟದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್ ಬೇರೆಯೇ ಇದೆ.
ಸಿಎಂ ಸಿದ್ದರಾಮಯ್ಯ ಸೋಮವಾರ ರಾತ್ರಿ ತಮ್ಮ ಸರ್ಕಾರದ ಎಲ್ಲಾ ಸಹೋದ್ಯೋಗಿಗಳಿಗೆ ಔತಣಕೂಟಕ್ಕೆ ಆಹ್ವಾನವಿತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಎಲ್ಲಾ ಸಚಿವರಿಗೆ ಆಹ್ವಾನ ನೀಡಲಾಗಿದೆ. ಆದರೆ ಈ ಔತಣಕೂಟದ ಹಿಂದೆ ಬೇರೆಯೇ ಲೆಕ್ಕಾಚಾರವಿರಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರಕ್ಕೆ 2.5 ವರ್ಷ ಪೂರೈಸುತ್ತಿದ್ದು ಸಚಿವ ಸಂಪುಟ ಪುನರಾರಚನೆ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಸುಮಾರು 10 ರಿಂದ 12 ಹಾಲಿ ಸಚಿವರಿಗೆ ಕೊಕ್ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಅವರ ಬದಲಿಗೆ ತಮ್ಮ ಆಪ್ತ ನಾಗೇಂದ್ರ ಸೇರಿದಂತೆ ಹಲವರಿಗೆ ಅವಕಾಶ ನೀಡಲು ಸಿಎಂ ಸಿದ್ಧತೆ ನಡೆಸಿದ್ದಾರೆ.
ಇದಕ್ಕಾಗಿಯೇ ಈ ಔತಣ ಕೂಟ ಎನ್ನಲಾಗುತ್ತಿದೆ. ಔತಣಕೂಟದ ನೆಪದಲ್ಲಿ ಸಚಿವರ ಮನವೊಲಿಸಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಂಪುಟ ಪುನರಾರಚನೆ ಎಂದರೆ ಹಾವಿನ ಹುತ್ತಕ್ಕೆ ಕೈ ಹಾಕಿದಂತೆ. ಹೀಗಾಗಿ ಯಾವುದೇ ಅಸಮಾಧಾನ ಮೂಡದೇ ಇರಲು ಸಿಎಂ ಔತಣ ಕೂಟದ ನೆಪ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.