ವಿಧಾನಸಭೆ ಚುನಾವಣೆಗಳಲ್ಲಿ ಮೋದಿ ಮ್ಯಾಜಿಕ್ ನಡೆದಿಲ್ಲ: ಶಿವಸೇನೆ

ಶುಕ್ರವಾರ, 20 ಮೇ 2016 (15:33 IST)
ನಿನ್ನೆ ಪ್ರಕಟವಾದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗಿದೆ ಎನ್ನುವ ಅಂಶವನ್ನು ತಳ್ಳಿಹಾಕಿದ ಬಿಜೆಪಿ ಮೈತ್ರಿಕೂಟದ ಪಕ್ಷವಾದ ಶಿವಸೇನೆ, ಕಳೆದ ಎರಡು ವರ್ಷಗಳ ಹಿಂದೆ ನಡೆದ ಮೋದಿ ಮ್ಯಾಜಿಕ್ ಈ ಬಾರಿ ವಿಫಲವಾಗಿದೆ ಎಂದು ಲೇವಡಿ ಮಾಡಿದೆ. 
 
ಬಿಜೆಪಿ ಪಾಲಿಗೆ ಅಚ್ಚೇ ದಿನ್ ಅಂದರೆ ಕೇರಳ ರಾಜ್ಯದಲ್ಲಿ ಬಿಜೆಪಿ ಮುಖಂಡ ಓ.ರಾಜಗೋಪಾಲ್ ಐತಿಹಾಸಿಕ ಜಯಗಳಿಸಿ ಒಂದು ಸ್ಥಾನ ಗೆದ್ದಿರುವುದು ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಟೀಕಿಸಿದ್ದಾರೆ.
 
ಆಸ್ಸಾಂ ರಾಜ್ಯದಲ್ಲಿ ಬಿಜೆಪಿ ಜಯಗಳಿಸಲು ಅಲ್ಲಿನ ಸ್ಥಳೀಯ ಪಕ್ಷಗಳಾದ ಆಸ್ಸಾಂ ಗಣ ಪರಿಷದ್ ಮತ್ತು ಬುಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷಗಳು ಕಾರಣವಾಗಿದ್ದರಿಂದ 126 ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟ 86 ಸ್ಥಾನಗಳಲ್ಲಿ ಜಯಗಳಿಸಿದೆ.
 
ಪ್ರಾಂತೀಯ ಪಕ್ಷಗಳಿಂದ ಬಿಜೆಪಿಗೆ ಲಾಭವಾಗಿದೆ. ಬಿಹಾರ್ ಸೋಲಿನ ನಂತರ ಬಿಜೆಪಿಗೆ ಈ ಗೆಲುವು ಸಂಜೀವಿನಿ ದೊರೆತಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ಪಶ್ಚಿಮ ಬಂಗಾಳ ಬಾಂಬ್ ತಯಾರಿಕರ ಮತ್ತು  ಉಗ್ರರ ತಾಣವಾಗಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅದು ಹೇಗೆ ಮಮತಾ ಬ್ಯಾನರ್ಜಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ ಎನ್ನುವುದನ್ನು ಜನತೆಗೆ ತಿಳಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
 
ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಹಲವಾರು ಸಾರ್ವಜನಿಕ ಸಭೆಗಳನ್ನು ಮಾಡಿದ್ದಾರೆ. ಬಿಜೆಪಿಯ ಘಟಾನುಘಟಿಗಳು ಪಶ್ಚಿಮ ಬಂಗಾಳದಲ್ಲಿ ತಳವೂರಿದ್ದರು. ರಾಜ್ಯದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಮಿತ್ ಶಾ ಆರೋಪಿಸಿದ್ದರು. ಆದಾಗ್ಯೂ ಬಿಜೆಪಿ ಕೇವಲ 3 ಸ್ಥಾನ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಲೇವಡಿ ಮಾಡಿದ್ದಾರೆ.  

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ