ಭಾರತೀಯರ ಭದ್ರತೆ ಕುರಿತು ಪರಿಶೀಲನೆಗೆ ಮೋದಿ ಸಭೆ

ಶನಿವಾರ, 22 ಏಪ್ರಿಲ್ 2023 (11:57 IST)
ನವದೆಹಲಿ : ಸೈನಿಕರ ಸಂಘರ್ಷಕ್ಕೆ ಸಿಲುಕಿರುವ ಸುಡಾನ್ನಲ್ಲಿ ಭಾರತೀಯರ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
 
ಶುಕ್ರವಾರ ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರೊಂದಿಗೆ ಸುಡಾನ್ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ.

ಸುಡಾನ್ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಇದು ಆಕಸ್ಮಿಕ ಯೋಜನೆಗಳು ಹಾಗೂ ಜನರನ್ನು ಸ್ಥಳಾಂತರಗೊಳಿಸುವುದು ಅಗತ್ಯವಾಗಿದೆ. ಜೊತೆಗೆ ಸುಡಾನ್ನಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವತ್ತ ಗಮನಹರಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಸುಡಾನ್ನಲ್ಲಿ ಕಳೆದ ಶನಿವಾರ ಸೇನೆ ಹಾಗೂ ಅರೆಸೇನಾಪಡೆಗಳ ನಡುವೆ ಸಂಘರ್ಷ ಪ್ರಾರಂಭವಾಗಿದ್ದು, ಇದೀಗ ಪರಿಸ್ಥಿತಿ ಇನ್ನಷ್ಟು ತಾರಕಕ್ಕೇರಿದೆ. ಕದನ ವಿರಾಮವನ್ನು ಒಪ್ಪದ ಮಿಲಿಟರಿ ಪಡೆಗಳ ಘರ್ಷಣೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 

ಸುಡಾನ್ ರಾಜಧಾನಿ ಖಾರ್ಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಯುದ್ಧವೇ ನಡೆದಿದೆ. ದೇಶಾದ್ಯಂತ ಹಲವೆಡೆ ವಿದ್ಯುತ್ ಕಡಿತವಾಗಿದ್ದರೆ, ಆಹಾರ, ನೀರು ಸಿಗದೆ ಜನರು ನರಳಾಡಿದ್ದಾರೆ. ಸ್ಥಳೀಯ ಜನರ ಸಂಪರ್ಕವೂ ಅಸ್ತವ್ಯಸ್ತಗೊಂಡಿರುವುದಾಗಿ ವರದಿಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ