ಮೋದಿಗೆ ತಮ್ಮ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್‌ ಇಲ್ಲವೆ ನೆಹರು ಬೇಕು: ದಿನೇಶ್ ಗುಂಡೂರಾವ್‌

Sampriya

ಸೋಮವಾರ, 31 ಮಾರ್ಚ್ 2025 (18:30 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ವೈಫಲ್ಯ ಮುಚ್ಚಿಹಾಕಲು  ಒಂದು ಕಾಂಗ್ರೆಸ್ ಇರಬೇಕು ಇಲ್ಲವೆ ನೆಹರು ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ನೀತಿಗಳಿಂದಾಗಿ ದಶಕಗಳಿಂದ ನಕ್ಸಲಿಸಂಗೆ ಪ್ರೋತ್ಸಾಹ  ಸಿಕ್ಕಿದೆ ಎಂಬ ಪ್ರಧಾನಿ ಹೇಳಿಕೆಗೆ ಆಕ್ರೋಶ ಹೊರಹಾಕಿ ದಿನೇಶ್ ಗುಂಡೂರಾವ್ ಪೋಸ್ಟ್ ಹಂಚಿಕೊಂಡಿದ್ದಾರೆ.

ನಕ್ಸಲ್ ಸಮಸ್ಯೆಗೆ ಕಾಂಗ್ರೆಸ್ ನೀತಿ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ‌. ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಒಂದು ಕಾಂಗ್ರೆಸ್ ಇರಬೇಕು ಇಲ್ಲವೆ ನೆಹರು ಇರಬೇಕು. ಇವರೆಡನ್ನು ಕನವರಿಸದೆ ಪ್ರಧಾನಿ ಜೀವಿಸಲಾರರು‌.

ಮೋದಿಯವರ ವರಸೆ ಹೇಗಿದೆ ಎಂದರೆ, ದೇಶದ GDP ಕುಸಿದರೆ ಅದಕ್ಕೆ ಕಾಂಗ್ರೆಸ್ ಕಾರಣ ಎನ್ನುತ್ತಾರೆ ಇಲ್ಲವೆ ನೆಹರು ಕಾರಣ ಎನ್ನುತ್ತಾರೆ. ನಿರುದ್ಯೋಗ, ರೂಪಾಯಿ ಅಪಮೌಲ್ಯಕ್ಕೂ ಇದೆ ಕಾರಣ ಕೊಡುತ್ತಾರೆ. ಕೊನೆಗೆ‌ ಮಳೆ ಜಾಸ್ತಿ ಬಂದರೂ ನೆಹೆರು ಕಾರಣ, ಮಳೆ ಬಾರದೆ ಇದ್ದರೂ ನೆಹರು ಕಾರಣ ಎನ್ನುತ್ತಾರೆ. ಇಂತಹವರಿಗೆ ಏನನ್ನಬೇಕು.

ಅಲ್ಲಾ ಸ್ವಾಮಿ ಮೋದಿಯವರೆ, ಕಳೆದ 11 ವರ್ಷಗಳಿಂದ ನೀವೆ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ. ಇಷ್ಟು ನೀವು ಕಡಿದು ಕಟ್ಟೆ ಹಾಕಿರುವುದು ಏನು.? ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಹಾಗೂ ನೆಹರು ಮೇಲೆ ಗೂಬೆ ಕೂರಿಸುವುದೆ ನಿಮ್ಮ ಕೆಲಸವೆ..? ತಮ್ಮನ್ನು ತಾವು ಜೇಮ್ಸ್‌ ಬಾಂಡ್ ಎಂದು ಭಾವಿಸಿರುವ ನಿಮಗೆ ಕಳೆದ 11 ವರ್ಷಗಳಿಂದ ನಕ್ಸಲ್ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಲಿಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ