ಸೈಡ್ ಇಫೆಕ್ಟ್ ವರದಿ ಬೆನ್ನಲ್ಲೇ ಕೊವಿಡ್ ಸರ್ಟಿಫಿಕೇಟ್ ನಿಂದ ಮೋದಿ ಫೋಟೋ ಮಾಯ

Krishnaveni K

ಗುರುವಾರ, 2 ಮೇ 2024 (12:17 IST)
ನವದೆಹಲಿ: ಕೊರೋನಾ ತಡೆಗೆ ಬಳಸಲಾಗಿದ್ದ ಲಸಿಕೆಯಲ್ಲಿ ಅಡ್ಡಪರಿಣಾಮಗಳಿವೆ ಎಂದು ಬ್ರಿಟನ್ ಮೂಲದ ಕಂಪನಿ ಒಪ್ಪಿಕೊಂಡ ಬೆನ್ನಲ್ಲೇ ಇದೀಗ ಕೊವಿಡ್ ವ್ಯಾಕ್ಸಿನ್ ಪಡೆದವರಿಗೆ ನೀಡಲಾಗುವ ಸರ್ಟಿಫಿಕೇಟ್ ನಲ್ಲಿ ಪ್ರಧಾನಿ ಮೋದಿ ಫೋಟೋ ತೆಗೆದುಹಾಕಲಾಗಿದೆ.

ಇತ್ತೀಚೆಗಷ್ಟೇ ಬ್ರಿಟನ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ಕೊರೋನಾಗಾಗಿ ನೀಡಲಾಗಿದ್ದ ವ್ಯಾಕ್ಸಿನ್ ನಲ್ಲಿ ಮೆದುಳು ಹೆಪ್ಪುಗಟ್ಟುವುದು, ಹೃದಯಸ್ತಂಬನದಂತಹ ಅಡ್ಡಪರಿಣಾಮಗಳಾಗಬಹುದು ಎಂದು ಕೋರ್ಟ್ ನಲ್ಲಿ ಒಪ್ಪಿಕೊಂಡಿತ್ತು. ಇದೇ ಕಂಪನಿಯ ಲಸಿಕೆಯನ್ನು ಭಾರತದಲ್ಲಿ ಕೊವಿಶೀಲ್ಡ್ ಹೆಸರಿನಲ್ಲಿ ನೀಡಲಾಗುತ್ತಿತ್ತು.

ಈ ವರದಿ ಬೆನ್ನಲ್ಲೇ ಈಗ ಕೊರೋನಾ ವ್ಯಾಕ್ಸಿನ್ ಸರ್ಟಿಫಿಕೇಟ್ ನಿಂದ ಮೋದಿ ಫೋಟೋ ಕಿತ್ತು ಹಾಕಲಾಗಿದೆ. ಇಷ್ಟು ದಿನ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡ ವ್ಯಕ್ತಿಗಳಿಗೆ ಸರ್ಟಿಫಿಕೇಟ್ ನೀಡುವಾಗ ಅಲ್ಲಿ ಪ್ರಧಾನಿ ಮೋದಿ ಫೋಟೋ ಇರುತ್ತಿತ್ತು. ಆದರೆ ಈಗ ಅದು ಮಾಯವಾಗಿದೆ.

ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಫೋಟೋ ಕಿತ್ತು ಹಾಕಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ ಮೋದಿ ಫೋಟೋ ಕಿತ್ತು ಹಾಕಿರುವುದನ್ನು ವಿಪಕ್ಷಗಳು, ನೆಟ್ಟಿಗರು ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ