ಪಕ್ಷದ ವಿರುದ್ಧವೇ ಬಾಂಬ್ ಹಾಕಿದ ಬಿಜೆಪಿ ನಾಯಕ: ವ್ಯಾಪಂ ಹಗರಣಕ್ಕೆ ಪಕ್ಷ ಕ್ಷಮೆಯಾಚಿಸಲಿ

ಬುಧವಾರ, 28 ಸೆಪ್ಟಂಬರ್ 2016 (14:20 IST)
ಇಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುವ ಮುನ್ನವೆ ಬಿಜೆಪಿ ಮುಖಂಡರೊಬ್ಬರು, ವ್ಯಾಪಂ ಹಗರಣ ಕುರಿತಂತೆ ಪಕ್ಷ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಂದಕುಮಾರ್ ಸಿಂಗ್ ಚೌಹಾನ್ ಅವರಿಗೆ ಪತ್ರ ಬರೆದಿರುವುದಾಗಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
 
   
ಬಿಜೆಪಿ ಮುಖಂಡರಾದ ರಾಜೇಶ್ ಭಾದುರಿಯಾ ಸುದ್ದಿಗಾರರೊಂದಿಗೆ ಮಾತನಾಡಿ,  ವ್ಯಾಪಂ ಹಗರಣ ಕುರಿತಂತೆ ಪಕ್ಷ ಕ್ಷಮೆಯಾಚಿಸುವುದು ಸೂಕ್ತ ಎಂದು ಪಕ್ಷದ ರಾಜ್ಯಾಧ್ಯಕ್ಷ ಚೌಹಾನ್ ಅವರಿಗೆ ಸೆಪ್ಟೆಂಬರ್ 21 ರಂದು ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ. 
 
ವ್ಯಾಪಂ ಹಗರಣದಿಂದಾಗಿ ಲಕ್ಷಾಂತರ ಯುವಕರು ಮತ್ತು ಅವರ ಪೋಷಕರು ತುಂಬಾ ತೊಂದರೆಯನ್ನು ಎದುರಿಸಿದ್ದಾರೆ. ಬಿಜೆಪಿ ನೈತಿಕ ಹೊಣೆ ಹೊರುವದಿರಲಿ. ಏನೂ ನಡಿದೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ಅತಿ ಹೇಯ ಸಂಗತಿ ಎಂದು ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. 
 
ಜನರಿಗೆ ತೊಂದರೆಯಾಗಿದ್ದಕ್ಕಾಗಿ ನಾವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ವ್ಯಾಪಂ ಹಗರಣದ ಬಗ್ಗೆ ಚರ್ಚೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
 
ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ದಲಿತರ ಓಟ್‌ಬ್ಯಾಂಕ್ ಪ್ರಮುಖ ಕಾರಣವಾಗಿದೆ. ಆದರೆ, ಬಿಜೆಪಿ ಸರಕಾರದಲ್ಲಿಯೇ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ದಲಿತ ಸಮುದಾಯಕ್ಕೆ ಕಳವಳ ಮೂಡಿಸಿದೆ. ದಲಿತರ ಬಗ್ಗೆ ಬಿಜೆಪಿ ತೋರಿಸುತ್ತಿರುವ ಕಾಳಜಿ ನಾಟಕೀಯವೆನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮುಂಬರುವ ಚುನಾವಣೆಯಲ್ಲಿ ದಲಿತ ಸಮುದಾಯದ ಮುಖಂಡನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕು. ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಜಾರಿಗೊಳಿಸಬೇಕು ಎಂದು ಬಿಜೆಪಿ ಮುಖಂಡ ರಾಜೇಶ್ ಭಾದುರಿಯಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ