ಮುಸ್ಲಿಮರಿಗೆ ಮುಲಾಯಂ ಮೋಸ, ಪಾಠ ಕಲಿಸಲು ಸುಸಮಯ: ಶಾಹಿ ಇಮಾಮ್

ಸೋಮವಾರ, 2 ಜನವರಿ 2017 (12:16 IST)
ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಆಂತರಿಕ ಬಿಕ್ಕಟ್ಟಿನಿಂದ ಜರ್ಜರಿತರಾಗಿರುವ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ  ಜಾಮಾ ಮಸೀದಿಯ ಶಾಹಿ ಇಮಾಮ್, ಸೈಯ್ಯದ್ ಇಮಾಮ್ ಬುಕಾರಿ ಸಹ ಶಾಕ್ ನೀಡಿದ್ದಾರೆ. ಮುಸ್ಲಿಂ ಸಮುದಾಯದವರೆಲ್ಲ ಒಂದಾಗಿ ನಮಗೆ ಮೋಸ ಮಾಡಿರುವ ಮುಲಾಯಂ ಸಿಂಗ್ ಯಾದವ್ ಅವರಿಗೆ ತಕ್ಕ ಪಾಠ ಕಲಿಸಬೇಕಾಗಿ ಅವರು ಕರೆ ನೀಡಿದ್ದಾರೆ. 
 
2012ರ ಚುನಾವಣಾ ಪ್ರಣಾಲಿಕೆಯಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿದ್ದ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡುತ್ತೇವೆ. ಸಮುದಾಯಕ್ಕೆ 18% ಮೀಸಲಾತಿ ನೀಡುತ್ತೇವೆ, ಎಂಬ ಮುಲಾಯಂ ವಾಗ್ದಾನ ಮಾಡಿದ್ದರು. ಆದರೆ ಅವರು ತಮ್ಮ ಮಾತನ್ನು ಮೀರಿದ್ದಾರೆ. ಇದು ಅವರಿಗೆ ಪಾಠ ಕಲಿಸಲು ಸರಿಯಾದ ಸಮಯ ಎಂದು ಬುಕಾರಿ ಹೇಳಿದ್ದಾರೆ. 
 
ಸಮಾಜವಾದಿ ಪಕ್ಷ ಆಡಳಿತಕ್ಕೆ ಬಂದ ಒಂದು ವರ್ಷದಲ್ಲಿಯೇ 113 ಕೋಮು ಗಲಭೆಗಳು ನಡೆದವು. 13 ಪ್ರದೇಶಗಳಲ್ಲಿ ಕರ್ಫ್ಯೂವನ್ನು ಹೇರಲಾಯ್ತು. ಆಡಳಿತದಲ್ಲೂ ಇಸ್ಲಾಂ ಸಮುದಾಯದವರಿಗೆ ಸಾಕಷ್ಟು ಅವಕಾಶ ನೀಡಲಾಗಿಲ್ಲ ಎಂದು ಬುಕಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
2012ರ ವಿಧಾನಸಭಾ ಚುನಾವಣೆಯಲ್ಲಿ ಬುಕಾರಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ದರು.

ವೆಬ್ದುನಿಯಾವನ್ನು ಓದಿ