ಉತ್ತರ ಪ್ರದೇಶ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉಚ್ಚಾಟನೆ ಆದೇಶವನ್ನು ಅವರ ತಂದೆ, ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಾಪಸ್ ಪಡೆದಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಆರೋಪದ ಮೇಲೆ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಸಂಬಂಧಿ ರಾಮ್ ಗೋಪಾಲ್ ಯಾದವನ್ ಅವರನ್ನು ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ 6 ವರ್ಷಗಳ ಮಟ್ಟಿಗೆ ಉಚ್ಚಾಟನೆ ಮಾಡಿದ್ದರು.
ಅಖಿಲೇಶ್ ಯಾದವ್ ಅವರಿಗೆ ಸಿಕ್ಕ ಭಾರಿ ಬೆಂಬಲ ನೋಡಿ ಕೇವಲ 24ಗಂಟೆಗಳೊಳಗೆ ಮುಲಾಯಂ ಸಿಂಗ್ ಯಾದವ್ ಯುಟರ್ನ್ ಹೊಡೆದಿದ್ದು ಉತ್ತರ ಪ್ರದೇಶದಲ್ಲಿ ನಡೆದ ದೊಡ್ಡ ಹೈಡ್ರಾಮಾ ಹೊಸ ಟರ್ನ್ ಪಡೆದುಕೊಂಡಿದೆ. ಪಕ್ಷ ಇಬ್ಭಾಗವಾಯ್ತು ಎನ್ನುವಂತಿದ್ದ ಉದ್ವಿಗ್ನ ಸನ್ನಿವೇಶ ತಾತ್ಕಾಲಿಕವಾಗಿ ಶಮನಗೊಂಡಿದ್ದು, ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಾಯ್ತು ಎನ್ನುತ್ತಿದ್ದಾರೆ ಸಮಾಜವಾದಿ ನಾಯಕರು.
ನಿನ್ನೆ ಅವರನ್ನು ಅಮಾನತು ಮಾಡಿ ಮಾತನಾಡಿದ್ದ ಮುಲಾಯಂ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಕ್ಕೆ ಅವರಿಬ್ಬರನ್ನು ಉಚ್ಚಾಟಿಸಲಾಗಿದೆ. ಅಖಿಲೇಶ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನು. ನನ್ನನ್ನು ಕೇಳದೆಯೇ ನಿರ್ಧಾರ ತೆಗೆದುಕೊಳ್ಳುವುದನ್ನು ಸಹಿಸಲಾಗುವುದಿಲ್ಲ. ಪಕ್ಷದ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದ್ದರೂ ಮತ್ತೊಂದು ಪಟ್ಟಿ ಹೊರಡಿಸುವ ಮೂಲಕ ಅಖಿಲೇಶ್ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದ್ದರು.
ಪಕ್ಷದಿಂದ ಉಚ್ಚಾಟಿತರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪಕ್ಷದೊಳಗಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಅವರು ಲಖನೌನಲ್ಲಿರುವ ತಮ್ಮ ನಿವಾಸದಲ್ಲಿ ಸಭೆಯನ್ನು ನಡೆಸಿದ್ದರು.ಪಕ್ಷದ 224 ಶಾಸಕರಲ್ಲಿ 190 ಶಾಸಕರು ಮತ್ತು 30 ಎಮ್ಎಲ್‌ಸಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಈ ರೀತಿ ಭಾರಿ ಬೆಂಬಲ ಪಡೆಯುವ ಮೂಲಕ ಅಖಿಲೇಶ್ ತಂದೆಗೆ ಸೆಡ್ಡು ಹೊಡೆದಿದ್ದರು.
ಇನ್ನೊಂದೆಡೆ ಮುಲಾಯಂ ಕೂಡ ಸಂಸದೀಯ ಸಭೆ ಕರೆದಿದ್ದು, ಈ ಸಭೆಯಲ್ಲಿ ಕೇವಲ 15 ಶಾಸಕರು ಪಾಲ್ಗೊಂಡಿದ್ದು ಉಳಿದ 50 ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ತಂದೆ ವಿರುದ್ಧ ತೊಡೆತಟ್ಟಿ ನಿಂತ ಮಗನೇ ಗೆದ್ದಿದ್ದು, ಅನಿವಾರ್ಯವಾಗಿ ತಂದೆಯೇ ಮಗನಿಗೆ ತಲೆಬಾಗಿಸ ಬೇಕಾಯಿತು.
ಇಂದು ಮುಲಾಯಂ ಮತ್ತು ಅಖಿಲೇಶ್ ಇಬ್ಬರು ಸಭೆ ಸೇರಿದ್ದು ಅಖಿಲೇಶ್ ಶರತ್ತುಗಳನ್ನಿಟ್ಟಿದ್ದರು. ಎಲ್ಲ ಶರತ್ತುಗಳಿಗೆ ಮುಲಾಯಂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದ್ದು ಅಖಿಲೇಶ್ ಮತ್ತು ರಾಮ್ ಗೋಪಾಲ್ ಉಚ್ಚಾಟನೆಯನ್ನು ವಾಪಸ್ ಪಡೆಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.