ಕಳೆದ ವರ್ಷ ಭ್ರಷ್ಟಾಚಾರ ಆರೋಪಗಳ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಮುಖಂಡ ಏಕನಾಥ್ ಖಾಡ್ಸೆ, ನನ್ನ ಪರಿಸ್ಥಿತಿ ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯಂತಾಗಿದೆ ಎಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿದೆ.
ತವರುಕ್ಷೇತ್ರವಾದ ಜಲಗಾಂವ್‌ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದಲ್ಲಿ ನನ್ನ ಪರಿಸ್ಥಿತಿ ರಾಷ್ಟ್ರೀಯ ನಾಯಕ ಎಲ್.ಕೆ.ಆಡ್ವಾಣಿ ಅವರಂತಾಗಿದೆ. ಪಕ್ಷದ ಹಿರಿಯ ನಾಯಕರು ಮಾರ್ಗದರ್ಶನ ನೀಡಬೇಕು, ಪಕ್ಷಕ್ಕೆ ಬಂದ ಹೊಸ ನಾಯಕರು ಅಧಿಕಾರ ಅನುಭವಿಸಬೇಕು ಎನ್ನುವಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಹಲವು ವರ್ಷಗಳಿಂದ ರಾಜ್ಯ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಪಕ್ಷದ ಬೆಳವಣಿಗೆಗೆ ಸಹಾಯ ಮಾಡಿದ್ದೇನೆ. ಅದರಂತೆ, ಆಡ್ವಾಣಿ ಕೂಡಾ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಬೆಳೆಸಿದ್ದಾರೆ. ಆದರೆ, ಇದೀಗ ಹಿರಿಯರು ಮಾರ್ಗದರ್ಶನ ನೀಡಬೇಕು, ಹೊಸಬರು ಅಧಿಕಾರ ಅನುಭವಿಸಬೇಕು ಎನ್ನುವಂತಾಗಿರುವುದು ವಿಷಾದನೀಯ ಎಂದು ಮಾಜಿ ಸಚಿವ ಏಕನಾಥ್ ಖಾಡ್ಸೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.