ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಯುಎಇಗೆ ಮೂರು ದಿನ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಪ್ಯಾರಿಸ್ಗೆ ಪ್ರಧಾನಿ ತೆರಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಫ್ರಾನ್ಸ್ಗೆ ತೆರಳಿದ್ದು, ಜುಲೈ 13 ಮತ್ತು 14ರಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಜುಲೈ 14ರಂದು ನಡೆಯಲಿರುವ ಬಾಸ್ಟಿಲ್ ಡೇ ಪರೇಡ್ನಲ್ಲಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದು, ಈ ಪರೇಡ್ನಲ್ಲಿ 269 ಸದಸ್ಯರ ಭಾರತೀಯ ತ್ರಿ-ಸೇವಾ ತುಕಡಿ ಭಾಗವಹಿಸಲಿದೆ.
ಈ ಸಂದರ್ಭ ಫ್ರೆಂಚ್ ಜೆಟ್ಗಳೊಂದಿಗೆ ಭಾರತೀಯ ವಾಯುಪಡೆಯ ಮೂರು ರಫೇಲ್ ಫೈಟರ್ ಜೆಟ್ಗಳು ಫ್ಲೈಪಾಸ್ಟ್ಗೆ ಸೇರಿಕೊಳ್ಳಲಿವೆ. ಅಲ್ಲದೇ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದೆ ಕೊಂಡೊಯ್ಯಲು ಪ್ರಧಾನಿ ಮೋದಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.