ನಿರ್ಮಲಾ ಸೀತಾರಾಮನ್ ಯಾಕೆ ಚುನಾವಣೆಗೆ ನಿಂತಿಲ್ಲ? ಸಚಿವೆ ಕೊಟ್ಟ ಉತ್ತರ ಹೀಗಿದೆ

Krishnaveni K

ಗುರುವಾರ, 28 ಮಾರ್ಚ್ 2024 (12:26 IST)
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳಿತ್ತು. ಆದರೆ ಅದು ಸುಳ್ಳಾಗಿದೆ.

ಈ ಬಾರಿಯೂ ನಿರ್ಮಲಾ ಲೋಕಸಭೆ ಕಣಕ್ಕಿಳಿದಿಲ್ಲ. ರಾಜ್ಯಸಭೆ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್ ಗೆ ಈಗ ತಮ್ಮದೇ ಆದ ವರ್ಚಸ್ಸಿದೆ. ಹೀಗಾಗಿ ಅವರು ಈ ಬಾರಿ ಲೋಕಸಭೆ ಹಣಾಹಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಚುನಾವಣೆಗೆ ಸ್ಪರ್ಧಿಸದೇ ಇರಲು ಕಾರಣವೇನು ಎಂದು ಸ್ವತಃ ನಿರ್ಮಲಾ ಬಹಿರಂಗಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ಹಣ ಬೇಕು. ಆದರೆ ನನ್ನ ಬಳಿ ಈಗ ಅದಕ್ಕೆ ತಕ್ಕಷ್ಟು ಹಣವಿಲ್ಲ. ಹಾಗಾಗಿ ಸ್ಪರ್ಧೆ ಮಾಡುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.  ಅಲ್ಲದೆ ಚುನಾವಣೆಗೆ ಸ್ಪರ್ಧೆ ನಡೆಸುವ ವಿಚಾರದಲ್ಲಿ ತಮಗಿರುವ ಗೊಂದಲಗಳನ್ನೂ ಹೇಳಿಕೊಂಡಿದ್ದಾರೆ.

‘ಸುಮಾರು 10 ದಿನಗಳ ಕಾಲ ಯೋಚನೆ ಮಾಡಿದ ನಂತರ ನಾನು ಸ್ಪರ್ಧೆ ಮಾಡಲ್ಲ ಎಂದು ತೀರ್ಮಾನಿಸಿದೆ. ಸ್ಪರ್ಧೆ ಮಾಡಲು ಬೇಕಾದಷ್ಟು ಹಣ ನನ್ನ ಬಳಿ ಇಲ್ಲ. ಅಲ್ಲದೆ ತಮಿಳುನಾಡಿನಿಂದ ಸ್ಪರ್ಧಿಸಲಾ, ಆಂಧ್ರದಿಂದ ಸ್ಪರ್ಧಿಸಲಾ ಎಂಬ ಗೊಂದಲವೂ ಇತ್ತು. ಅಲ್ಲದೆ, ಯಾವ ಸಮುದಾಯಕ್ಕೆ ಸೇರಿದವರು, ಯಾವ ಜಾತಿಯವರಿಗೆ ಮೇಲುಗೈ ಇದೆ ಎಂಬಿತ್ಯಾದಿ ಯೋಚನೆಗಳೆಲ್ಲಾ ನನ್ನನ್ನು ಗೊಂದಲಕ್ಕೀಡು ಮಾಡಿತು. ಹೀಗಾಗಿ ನಾನು ಸ್ಪರ್ಧೆ ಮಾಡದೇ ಇರಲು ತೀರ್ಮಾನಿಸಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ