ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ, ಅಧಿಕಾರಕ್ಕೆ ತರಲು ಶ್ರಮಿಸಿದ ಸಿಎಂ ರೇವಂತ್ ರೆಡ್ಡಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಬಿಜೆಪಿ ಸೇರುತ್ತಾರಂತೆ! ಹೀಗೊಂದು ಹೇಳಿಕೆಯನ್ನು ಮಾಜಿ ಸಚಿವ ಕೆಟಿ ರಾಮ್ ರಾವ್ ಹೇಳಿದ್ದಾರೆ.
ರೇವಂತ್ ರೆಡ್ಡಿ ಇತ್ತೀಚೆಗೆ ಪ್ರಧಾನಿ ಮೋದಿಯ ಜೊತೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಮೋದಿಯನ್ನು ಹೊಗಳಿ ಅಣ್ಣನಂತೆ ಎಂದಿದ್ದರು. ಗುಜರಾತ್ ಮಾದರಿಯಂತೆ ನಮ್ಮ ರಾಜ್ಯವನ್ನೂ ಮಾದರಿ ರಾಜ್ಯ ಮಾಡುವುದಾಗಿ ಹೇಳಿದ್ದರು. ಅವರ ಈ ಹೇಳಿಕೆ ಕಾಂಗ್ರೆಸ್ಸಿಗರ ಹುಬ್ಬೇರುವಂತೆ ಮಾಡಿತ್ತು.
ಇದೀಗ ರೇವಂತ್ ಬಗ್ಗೆ ಮಾತನಾಡಿರುವ ಕೆಟಿ ರಾಮರಾವ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನವನ್ನು ಗೆಲ್ಲುವುದೂ ಕಷ್ಟ. ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ರೇವಂತ್ ರೆಡ್ಡಿ ಬಿಜೆಪಿ ಸೇರಿಕೊಳ್ಳಲಿದ್ದಾರೆ. ಬಿಜೆಪಿಗೆ ನಿಷ್ಠೆ ಬದಲಾಯಿಸಿದ ಮೊದಲ ಕಾಂಗ್ರೆಸ್ ನಾಯಕ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
ಅಲ್ಲದೆ ರೇವಂತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿರುವ ಕೆಟಿ ರಾಮರಾವ್, ಲೋಕಸಭೆ ಚುನಾವಣೆಗೆ ಮುನ್ನ ರೇವಂತ್ ದೆಹಲಿಯಲ್ಲಿರುವ ತಮ್ಮ ಹೈಕಮಾಂಡ್ ಗೆ 2,500 ಕೋಟಿ ರೂ. ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.