ತಿರುವನಂತಪುರಂ: ಭಾರತ್ ಮಾತಾ ಕೀ ಜೈ, ಜೈ ಹಿಂದ್ ಎಂಬ ಘೋಷಣೆಗಳನ್ನು ಮೊದಲು ಪರಿಚಯಿಸಿದ್ದೇ ಒಬ್ಬ ಮುಸ್ಲಿಂ ನಾಯಕ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಘ ಪರಿವಾರದವರು ಅವರ ಕಾರ್ಯಕ್ರಮಗಳಲ್ಲಿ ಭಾರತ್ ಮಾತಾ ಕೀ ಜೈ, ಜೈ ಹಿಂದ್ ಸ್ಲೋಗನ್ ಹೇಳಲು ಹೇಳುತ್ತಾರೆ. ಆದರೆ ಈ ಸ್ಲೋಗನ್ ಮೊದಲು ಪರಿಚಯಿಸಿದ್ದೇ ಓರ್ವ ಮುಸ್ಲಿಂ. 19 ನೇ ಶತಮಾನದಲ್ಲಿ ಮರಾಠಾ ಪೇಶ್ವ ನಾನಾ ಸಾಹೇಬ್ ಗೆ ಪ್ರಧಾನ ಮಂತ್ರಿಯಾಗಿದ್ದ ಅಝಿಮುಲ್ಲಾ ಖಾನ್ ಎಂಬಾತ ಈ ಸ್ಲೋಗನ್ ಗಳನ್ನು ಮೊದಲು ಹೇಳಿದ್ದ. ಆತ ಒಬ್ಬ ಮುಸ್ಲಿಂ. ಬಹುಶಃ ಇದು ಸಂಘ ಪರಿವಾರದವರಿಗೆ ಗೊತ್ತೇ ಇರಲ್ಲ.
ಅದೇ ರೀತಿ ಜೈ ಹಿಂದ್ ಎನ್ನುವ ಘೋಷಣೆಯನ್ನು ಪರಿಚಯಿಸಿದ್ದು ಓರ್ವ ಮಾಜಿ ರಾಯಭಾರಿ ಅಬಿದ್ ಹಸನ್ ಎಂಬಾತ. ಹಾಗಾಗಿ ಅದೂ ಕೂಡಾ ಮುಸ್ಲಿಮರ ಕೊಡುಗೆ. ಹೀಗಾಗಿ ಮುಸ್ಲಿಮರು ದೇಶ ಬಿಟ್ಟು ಹೋಗಬೇಕು, ಪಾಕಿಸ್ತಾನಕ್ಕೆ ಹೋಗಬೇಕು ಎನ್ನುವ ಸಂಘ ಪರಿವಾರದವರು ಮೊದಲು ಈ ಇತಿಹಾಸಗಳನ್ನು ತಿಳಿಯಬೇಕು ಎಂದಿದ್ದಾರೆ.
ಅವರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪಿಕೆ ಕೃಷ್ಣದಾಸ್, ಹಾಗಿದ್ದರೆ ಮುಸ್ಲಿಮರು ಪರಿಚಯಿಸಿದ ಶಬ್ಧ ಎಂದು ಸಿಪಿಎಂ ನಾಯಕರು ಈ ಸ್ಲೋಗನ್ ಗಳನ್ನು ಹೇಳಲು ತಯಾರಿದ್ದಾರೆಯೇ? ಎಂದು ಪ್ರಶ್ನಸಿದ್ದಾರೆ.