ನವದೆಹಲಿ : ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ 10% ತೆರಿಗೆ ವಿಧಿಸಲಾಗುವುದು ಎಂದು ಹರಿದಾಡುತ್ತಿದ್ದ ಸುದ್ದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಅಂತಹ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ 63 ನೇ ವಾರ್ಷಿಕ SIAM ಸಮಾವೇಶದಲ್ಲಿ ಮಾತನಾಡಿದ್ದ ಗಡ್ಕರಿ, ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಡೀಸೆಲ್ಗೆ ವಿದಾಯ ಹೇಳಿ. ದಯವಿಟ್ಟು ಡೀಸೆಲ್ ವಾಹನಗಳನ್ನು ತಯಾರಿಸುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಅಂತಹ ವಾಹನಗಳ ಮಾರಾಟ ಕಷ್ಟವಾಗುವಷ್ಟು ಹೆಚ್ಚುವರಿ ತೆರಿಗೆ ವಿಧಿಸುತ್ತೇವೆ ಎಂದು ಸಚಿವರು ಎಚ್ಚರಿಸಿದ್ದಾರೆಂದು ವರದಿಯಾಗಿತ್ತು.
ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ 10% ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇವೆ. ಬಹುತೇಕ ರಾಷ್ಟ್ರಗಳಲ್ಲಿ ಡೀಸೆಲ್ ವಾಹನಗಳ ಮೇಲೆ ಇಂಥ ತೆರಿಗೆ ವಿಧಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ ಎನ್ನಲಾಗಿತ್ತು.
ಈ ರೀತಿಯ ಸುದ್ದಿ ಹರಿದಾಡುತ್ತಿದ್ದಂತೆ ಸಚಿವ ಗಡ್ಕರಿ ಟ್ವೀಟ್ ಮಾಡಿದ್ದಾರೆ. ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ 10% ತೆರಿಗೆ ವಿಧಿಸುವ ಮಾಧ್ಯಮ ವರದಿಗಳ ಬಗ್ಗೆ ಸ್ಪಷ್ಟಪಡಿಸುವ ತುರ್ತು ಅಗತ್ಯವಿದೆ. ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.