ದಾಂಪತ್ಯದಲ್ಲಿನ ಬಿರುಕು, ಅಸಮಾಧಾನ ಇತ್ಯಾದಿಗಳ ಕಾರಣಕ್ಕೆ ವಿವಾಹಿತ ಮಹಿಳೆಯರು ಐಪಿಸಿ ಸೆ.498ಎ ಇದರ ದುರ್ಬಳಕೆ ಮಾಡಿ ಪತಿಯ ಹೆತ್ತವರು, ಅಪ್ರಾಪ್ತ ವಯಸ್ಸಿನ ಮಕ್ಕಳು, ಸಂಬಂಧಿಕರು, ಅಜ್ಜ-ಅಜ್ಜಿ ಮುಂತಾದವರ ವಿರುದ್ಧ ಸುಳ್ಳು ಕ್ರಿಮಿನಲ್ ಕೇಸುಗಳನ್ನು ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಅಮಾಯಕರ ವಿರುದ್ಧ ಹಾಕಲಾಗುವ ಈ ಬಗೆಯ ಸುಳ್ಳು ಕ್ರಿಮಿನಲ್ ಕೇಸುಗಳು ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದರಿಂದ ಅವುಗಳ ಸತ್ಯಾಸತ್ಯತೆಯನ್ನು ಸರಿಯಾಗಿ ಪರಾಮರ್ಶೆ ಮಾಡಿಯೇ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಜಸ್ಟಿಸ್ ಎ ಕೆ ಗೋಯಲ್ ಮತ್ತು ಯು ಯು ಲಲಿತ್ ಅವರನ್ನು ಒಳಗೊಂಡ ಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ ವರದಕ್ಷಿಣೆ ಹಿಂಸೆ ಪ್ರಕರಣಗಳ ದೂರನ್ನು ನಿಭಾಯಿಸಲು ನೆರವಾಗುವ ಸಲುವಾಗಿ ಎಲ್ಲ ರಾಜ್ಯಗಳು ಪ್ರತಿಯೊಂದು ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಸಮಿತಿಯೊಂದನ್ನು ರೂಪಿಸಬೇಕು ಎಂದು ಸಲಹೆ ನೀಡಿದೆ.