ನವದೆಹಲಿ: ಜನಿವಾರ ಬಿಡಿ, ರೈಲ್ವೇ ಪರೀಕ್ಷೆಗೆ ಮಂಗಳ ಸೂತ್ರವನ್ನೂ ಧರಿಸಿರಬಾರದು ಎಂಬ ರೈಲ್ವೇ ಇಲಾಖೆಯ ವಿವಾದಾತ್ಮಕ ತೀರ್ಪಿಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕತಪಡಿಸಿವೆ. ಇದರ ಬೆನ್ನಲ್ಲೇ ಈ ಅಂಶವನ್ನು ಕೈ ಬಿಡುವಂತೆ ರೈಲ್ವೇ ಖಾತೆ ರಾಜ್ಯ ಸಚಿವ ಸೋಮಣ್ಣ ಸೂಚನೆ ನೀಡಿದ್ದಾರೆ.
ರೈಲ್ವೇ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಟೆಂಡೆಂಟ್ ಪರೀಕ್ಷೆಗೆ ಹಾಜರಾಗಲು ಕೆಲವು ಷರತ್ತು ವಿಧಿಸಿತ್ತು. ಇದರಲ್ಲಿ ಮಹಿಳೆಯರು ಮಂಗಳಸೂತ್ರ ಧರಿಸಿರಬಾರದು, ಪುರುಷರು ಜನಿವಾರ ಧರಿಸಿರಬಾರದು ಎಂಬ ಷರತ್ತೂ ಇತ್ತು.
ಇದಕ್ಕೆ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳ ಸೂತ್ರವನ್ನು ಧರಿಸಿರಬಾರದು ಎಂದು ಹೇಳಲಾಗಿತ್ತು. ಹಿಂದೂ ಸಂಘಟನೆಗಳ ಆಕ್ರೋಶದ ಬೆನ್ನಲ್ಲೇ ಈ ವಿಚಾರವನ್ನು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ರೈಲ್ವೇ ಸಚಿವರಿಗೆ ಮಾಹಿತಿ ನೀಡಿದ್ದರು.
ಇದಕ್ಕೆ ಸ್ಪಂದಿಸಿರುವ ಸಚಿವ ಸೋಮಣ್ಣ ಮಂಗಳಸೂತ್ರ, ಜನಿವಾರದಂತಹ ಧಾರ್ಮಿಕ ಸೂಚಕಗಳನ್ನು ತೆಗೆಸದಂತೆ ಸೂಚನೆ ನೀಡಿದ್ದಾರೆ. ಮೊನ್ನೆಯಷ್ಟೇ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ಜನಿವಾರ ತೆಗೆಸಿದ ಪ್ರಕರಣ ಭಾರೀ ವಿವಾದಕ್ಕೀಡಾಗಿತ್ತು. ಇದರ ಬೆನ್ನಲ್ಲೇ ರೈಲ್ವೇ ಇಲಾಖೆ ವಿವಾದಾತ್ಮಕ ನಿರ್ಧಾರ ಮಾಡಿತ್ತು.